ಶೀಘ್ರ ಮಿಲಿಯಗಟ್ಟಲೆ ಮಂದಿ ಬಲಿಯಾಗಲಿದ್ದಾರೆ ಎಂದು ಬಿಲ್ ಗೇಟ್ಸ್ ಎಚ್ಚರಿಸಿದ್ದು ಏಕೆ?
ಮ್ಯೂನಿಕ್, ಫೆ.19: ಮುಂದಿನ 10 ರಿಂದ 15 ವರ್ಷಗಳಲ್ಲಿ ಮಿಲಿಯನ್‌ಗಟ್ಟಲೆ ಮಂದಿ ಮಾರಣಾಂತಿಕ ಜಾಗತಿಕ ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗುವ ಸಾಧ್ಯತೆಯಿದೆ ಎಂದು ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಎಚ್ಚರಿಕೆ ನೀಡಿದ್ದಾರೆ.
ಮ್ಯೂನಿಕ್ ಸೆಕ್ಯೂರಿಟಿ ಕಾನ್ಫರೆನ್ಸ್‌ನಲ್ಲಿ ಶನಿವಾರ ಮೊದಲ ಬಾರಿ ಮಾತನಾಡಿದ ಗೇಟ್ಸ್, ನಾವು ಇದನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇದ್ದರೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಜೈವಿಕ ಯುದ್ಧದ ಭೀತಿ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಮುಂದಿನ ದಿನಗಳಲ್ಲಿ ಭಯೋತ್ಪಾದಕರು ಕಂಪ್ಯೂಟರ್ ಪರದೆಯಲ್ಲಿ ಜೆನೆಟಿಕ್ ಇಂಜಿನಿಯರಿಂಗ್ ಬಳಸಿಕೊಂಡು ಕೃತಕ ಸಿಡುಬು ವೈರಸ್‌ಗಳನ್ನು....ಅಪಾಯಕಾರಿ ಸಾಂಕ್ರಾಮಿಕ, ಪ್ರಾಣಾಂತಿಕ ಜ್ವರವನ್ನು ಸೃಷ್ಟಿಸುವ ಸಾಧ್ಯತೆಯಿದೆ. ಹೀಗಾಗಿ ಪರಮಾಣು ಪ್ರತಿರೋಧಕ್ಕೆ ನೀಡುವ ಮಹತ್ವವನ್ನೇ ಮಾರಣಾಂತಿಕ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾವೆಲ್ಲರೂ ಈಗಲೇ ಸಜ್ಜಾಗಬೇಕಾಗಿದೆ ಎಂದು ಅಮೆರಿಕದ ಗೇಟ್ಸ್ ಕರೆ ನೀಡಿದ್ದಾರೆ.
ಪರಮಾಣು ಶಸ್ತ್ರಾಸ್ತದ ಮೂಲಕ ಆಗುವ ಸಾವಿನ ಸಂಖ್ಯೆಯನ್ನು 100 ಮಿಲಿಯನ್‌ಗೆ ತಡೆಗಟ್ಟಬಹುದು. ಆದರೆ, ಸಿಡುಬುನಂತಹ ಸಾಂಕ್ರಾಮಿಕ ರೋಗ ಒಮ್ಮೆ ಬಂದರೆ ಅದನ್ನು ತಡೆಯಲು ಸಾಧ್ಯವಿಲ್ಲ. ಏಕೆಂದರೆ ಜನರು ಮುಗ್ದರಾಗಿರುತ್ತಾರೆ. ಸರಿಯಾದ ತಯಾರಿಯಿರುವುದಿಲ್ಲ. ಸಾಂಕ್ರಾಮಿಕ ರೋಗ ಪ್ರಕೃತಿ ವೈಚಿತ್ರದಿಂದಲೂ, ಅಥವಾ ಭಯೋತ್ಪಾದಕರ ಕೈಯಿಂದ ಕೃತಕವಾಗಿಯೂ ಸೃಷ್ಟಿಯಾಗಬಹುದು. ಗಾಳಿಯ ಮುಖಾಂತರ ಹರಡುವ ಈ ರೋಗ ಪ್ರತಿವರ್ಷ 30 ಮಿಲಿಯನ್‌ಗೂ ಅಧಿಕ ಜನರ ಬಲಿ ಪಡೆಯುತ್ತಿದೆ ತಜ್ಞರು ಹೇಳುತ್ತಿದ್ದಾರೆ. ಮುಂದಿನ 10-15 ವರ್ಷಗಳಲ್ಲಿ ಸಾಂಕ್ರಾಮಿಕ ರೋಗದಿಂದ ಆಗುವ ಸಾವಿನ ಪ್ರಮಾಣ ಹೆಚ್ಚಾಗಬಹುದು ಎಂದು ಬಿಲ್ ಗೇಟ್ಸ್ ಆತಂಕವ್ಯಕ್ತಪಡಿಸಿದರು.
ಗೇಟ್ಸ್ ಕಳೆದ 20 ವರ್ಷಗಳಿಂದ ಜಾಗತಿಕ ಆರೋಗ್ಯ ಅಭಿಯಾನಕ್ಕೆ ಆರ್ಥಿಕ ನೆರವು ನೀಡುತ್ತಿದ್ದು, ಜೈವಿಕ ತಂತ್ರಜ್ಞಾನದಲ್ಲಿನ ಬೆಳವಣಿಗೆ, ಲಸಿಕೆ ಹಾಗೂ ಹೊಸ ಔಷಧಗಳಿಂದ ಸಾಂಕ್ರಾಮಿಕ ರೋಗ ನಮ್ಮ ಕೈ ಮೀರುವುದನ್ನು ತಡೆಯಬಹುದು ಎಂದು ಹೇಳಿದ್ದಾರೆ.