ತಪ್ಪಿದ ಭಾರೀ ದುರಂತ : 300ಕ್ಕೂ ಅಧಿಕ ಪ್ರಯಾಣಿಕರಿದ್ದ ಜೆಟ್ ಏರ್ ವೇಸ್ ವಿಮಾನ...
ಲಂಡನ್,ಫೆ.19: 300ಕ್ಕೂ ಅಧಿಕ ಮಂದಿ ಪ್ರಯಾಣಿಕರಿದ್ದ ಜೆಟ್‌ಏರ್‌ವೇಸ್ ವಿಮಾನವು, ವಾಯುಸಾರಿಗೆ ನಿಯಂತ್ರಣ ಕೇಂದ್ರದಿಂದ ಸಂಪರ್ಕವನ್ನು ಕಳೆದುಕೊಂಡ ಬಳಿಕ ಅದು ಜರ್ಮನ್ ವಾಯುಪಡೆಯ ವಿಮಾನಗಳ ಬೆಂಗಾವಲಿನೊಂದಿಗೆ ಲಂಡನ್‌ನಲ್ಲಿ ಸುರಕ್ಷಿತವಾಗಿ ಇಳಿದ ಘಟನೆ ರವಿವಾರ ವರದಿಯಾಗಿದೆ.
ವಿಮಾನವು ಗುರುವಾರ ಮುಂಬೈಯಿಂದ ಲಂಡನ್‌ಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿರುವುದಾಗಿ ಜೆಟ್ ಏರ್‌ವೇಸ್ ಸಂಸ್ಥೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ. ‘‘ ಮುಂಬೈನಿಂದ ಲಂಡನ್‌ನ ಹಿತ್ರೋ ವಿಮಾನನಿಲ್ದಾಣಕ್ಕೆ ಗುರುವಾರ ಪ್ರಯಾಣಿಸುತ್ತಿದ್ದ ಜೆಟ್‌ಏರ್‌ವೇಸ್ ವಿಮಾನ 9ಡಬ್ಲು 118, ಜರ್ಮನಿಯ ವಾಯುಪ್ರದೇಶದಲ್ಲಿ ಹಾರಾಡುತ್ತಿದ್ದಾಗ, ವಾಯುಸಾರಿಗೆ ನಿಯಂತ್ರಣ ಕೇಂದ್ರದ ಜೊತೆ ಸ್ವಲ್ಪ ಹೊತ್ತು ಸಂಪರ್ಕವನ್ನು ಕಳೆದುಕೊಂಡಿತ್ತು. ಆದರೆ ಕೆಲವೇ ನಿಮಿಷಗಳ ಬಳಿಕ ಎಟಿಸಿ ಜೊತೆ ಸಂಪರ್ಕವನ್ನು ಮರುಸ್ಥಾಪಿಸಲಾಯಿತು.ವಿಮಾನ ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಮುನ್ನೆಚ್ಚರಿಕೆಯಾಗಿ, ಜರ್ಮನಿಯ ವಾಯುಪಡೆಯು ತನ್ನ ವಿಮಾನವನ್ನು ಬೆಂಗಾವಲಿಗೆ ನಿಯೋಜಿಸಿತ್ತು. 330 ಪ್ರಯಾಣಿಕರು ಹಾಗೂ 15 ಸಿಬ್ಬಂದಿಯಿದ್ದ ವಿಮಾನವು, ಸುರಕ್ಷಿತವಾಗಿ ಲಂಡನ್‌ನಲ್ಲಿ ಇಳಿಯಿತು’’ ಎಂದು ಅದು ತಿಳಿಸಿದೆ.
ಘಟನೆಯ ಬಗ್ಗೆ ನಾಗರಿಕವಾಯುಯಾನ ಇಲಾಖೆಯ ಮಹಾನಿರ್ದೇಶಕ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿರುವುದಾಗಿ ಜೆಟ್‌ಏರ್‌ವೇಸ್‌ತಿಳಿಸಿದೆ.