×
Ad

ಉರ್ದು ಈಗ ಅಲ್ಪಸಂಖ್ಯಾತರಿಗೆ ಸೀಮಿತ ಭಾಷೆಯಾಗಿದೆ: ಶರ್ಮಿಳಾ ಟಾಗೋರ್

Update: 2017-02-19 21:09 IST

ಹೊಸದಿಲ್ಲಿ,ಫೆ.19: ಉರ್ದು ಭಾಷೆಯು ಈಗ ನಿಂತ ನೀರಿನಂತಾಗಿದ್ದು, ಅಲ್ಪಸಂಖ್ಯಾಯ ಸಮುದಾಯಗಳಿಗೆ ಮಾತ್ರ ಸೀಮಿತಗೊಂಡಿದೆ ಎಂದು ಹಿರಿಯ ನಟಿ ಶರ್ಮಿಳಾ ಟಾಗೋರ್ ಅವರು ಹೇಳಿದರು.

ಇಲ್ಲಿ ನಡೆಯುತ್ತಿರುವ ‘ಜಷ್ನ್-ಇ-ರೇಖ್ತಾ ’ ಸಮ್ಮೇಳನದಲ್ಲಿ ‘ಜಬ್ ಫಿಲ್ಮೆಂ ಉರ್ದು ಬೋಲ್ತಿ ಥೀ ’ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಉರ್ದು ಭಾಷೆಯನ್ನು ಇಂದು ಬಹುಶಃ ಮುಸ್ಲಿಮರು ಮಾತ್ರ ಮಾತನಾಡುತ್ತಿದ್ದಾರೆ ಎಂದರು.

 ನಮ್ಮ ಇತಿಹಾಸವನ್ನು ಅರಿತುಕೊಳ್ಳುವಲ್ಲಿ ಮತ್ತು ಸಮತೋಲಿತ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಸಂಪ್ರದಾಯಗಳು ಮುಖ್ಯವಾಗಿವೆ. ಆದರೆ ಭಾರತೀಯ ಇತಿಹಾಸದ ಅವಿಭಾಜ್ಯ ಅಂಗವಾಗಿದ್ದ ಉರ್ದು ಅದೇಕೋ ನಿಂತ ನೀರಾಗಿಬಿಟ್ಟಿದೆ. ಅದೀಗ ಅಲ್ಪಸಂಖ್ಯಾತರ ಭಾಷೆಯಾಗಿದ್ದು, ಬಹುಶಃ ಮುಸ್ಲಿಮರು ಮಾತ್ರ ಅದನ್ನು ಮಾತನಾಡುತ್ತಿದ್ದಾರೆ ಎಂದರು.

ಒಂದು ಕಾಲದಲ್ಲಿ ದಿಲ್ಲಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದ್ದ ಉರ್ದು ಭಾಷೆ ವಿಭಜನೆಯ ಶಾಪವನ್ನುಣ್ಣಬೇಕಾಯಿತು ಮತ್ತು ಅದು ನಮ್ಮ ದೇಶದ ಸಾಹಿತ್ಯಿಕ ಸಂಪ್ರದಾಯಕ್ಕೆ ಪೆಟ್ಟು ನೀಡಿತು ಎಂದ ಅವರು, ಉರ್ದು ಯಾವುದೇ ನಿರ್ದಿಷ್ಟ ಪ್ರದೇಶಕ್ಕೆ ಸೇರಿದ ಭಾಷೆಯಲ್ಲ. ಅದು ಕೇವಲ ಮುಸ್ಲಿಮರ ಅಥವಾ ಪಾಕಿಸ್ತಾನದ ಭಾಷೆಯೂ ಅಲ್ಲ. ಅದು ನಮ್ಮ ಭಾಷೆಯಾಗಿದೆ ಮತ್ತು ನಾವದನ್ನು ಹಾಗೆಯೇ ಉಳಿಸಿಕೊಳ್ಳಲು ಬಯಸುತ್ತೇವೆ ಎಂದು ಹೇಳಿದರು.

 ಬಾಲಿವುಡ್‌ನಲ್ಲಿ ಉರ್ದುವಿನ ಬಳಕೆಯ ಕುರಿತು ಮಾತನಾಡಿದ ಶರ್ಮಿಳಾ, ವಾಸ್ತವದಲ್ಲಿ 40ರ ಮತ್ತು 60ರ ದಶಕಗಳಲ್ಲಿ ಹಿಂದಿ ಮತ್ತು ಉರ್ದು ಭಾಷೆಗಳ ಸಂಗಮವಾಗಿದ್ದ ಹಿಂದುಸ್ತಾನಿ ಆಗ ಚಲನಚಿತ್ರಗಳಲ್ಲಿ ತುಂಬ ಜನಪ್ರಿಯವಾಗಿತ್ತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News