×
Ad

ಮೊದಲ ಏಕದಿನ: ದಕ್ಷಿಣ ಆಫ್ರಿಕ ತಂಡಕ್ಕೆ ರೋಚಕ ಜಯ

Update: 2017-02-19 23:21 IST

ಹ್ಯಾಮಿಲ್ಟನ್, ಫೆ.19: ಕ್ವಿಂಟನ್ ಡಿಕಾಕ್ ಆಕರ್ಷಕ ಅರ್ಧಶತಕ(69), ಎಬಿ ಡಿವಿಲಿಯರ್ಸ್(37) ಹಾಗೂ ಹಾಶಿಮ್ ಅಮ್ಲ(35) ಅವರ ಸಂದರ್ಭೋಚಿತ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕ ತಂಡ ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು 4 ವಿಕೆಟ್‌ಗಳ ಅಂತರದಿಂದ ರೋಚಕವಾಗಿ ಗೆದ್ದುಕೊಂಡಿದೆ.

ರವಿವಾರ ಇಲ್ಲಿ ನಡೆದ ಮಳೆಬಾಧಿತ ಪಂದ್ಯದಲ್ಲಿ ಗೆಲುವಿಗೆ 34 ಓವರ್‌ಗಳಲ್ಲಿ 208 ರನ್ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕ ತಂಡ ಕೇವಲ ಒಂದು ಎಸೆತ ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. ಈ ಮೂಲಕ 5 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 12ನೆ ಜಯ ಸಾಧಿಸಿದ ದಕ್ಷಿಣ ಆಫ್ರಿಕ 2005ರ ತನ್ನ ಸಾಧನೆಯನ್ನು ಸರಿಗಟ್ಟಿತು.

ಮಳೆಯಿಂದಾಗಿ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಜಯಿಸಿದ ದಕ್ಷಿಣ ಆಫ್ರಿಕ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಕಿವೀಸ್ ತಂಡ ಕ್ರಿಸ್ ಮೊರಿಸ್(4-62) ಹಾಗೂ ರಬಾಡ(2-31) ಅವರ ಶಿಸ್ತುಬದ್ಧ ಬೌಲಿಂಗ್ ದಾಳಿಯ ಹೊರತಾಗಿಯೂ ನಾಯಕ ಕೇನ್ ವಿಲಿಯಮ್ಸನ್(59 ರನ್, 53 ಎಸೆತ, 4 ಬೌಂಡರಿ, 2 ಸಿಕ್ಸರ್), ಬ್ರೌನ್ಲೀ(31), ಗ್ರಾಂಡ್‌ಹೋಮ್(ಅಜೇಯ 34), ನೀಶಾಮ್(29) ಸಾಹಸದ ನೆರವಿನಿಂದ 34 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 207 ರನ್ ಗಳಿಸಿತು.

 ಗೆಲ್ಲಲು ಸ್ಪರ್ಧಾತ್ಮಕ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕ ತಂಡಕ್ಕೆ ಡಿಕಾಕ್(69 ರನ್, 64 ಎಸೆತ, 9 ಬೌಂಡರಿ, 1 ಸಿಕ್ಸರ್) ಹಾಗೂ ಅಮ್ಲ(35 ರನ್, 43 ಎಸೆತ) ಮೊದಲ ವಿಕೆಟ್‌ಗೆ 88 ರನ್ ಸೇರಿಸಿ ಉತ್ತಮ ಆರಂಭ ನೀಡಿದರು.

ತಂಡ 156 ರನ್‌ಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ 7ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 54 ರನ್ ಸೇರಿಸಿದ ಡಿವಿಲಿಯರ್ಸ್(ಅಜೇಯ 37) ಹಾಗೂ ಫೆಲುಕ್ವಾಯೊ(ಅಜೇಯ 29) ತಂಡಕ್ಕೆ 33.5 ಓವರ್‌ಗಳಲ್ಲಿ ಗೆಲುವು ತಂದರು. 6 ಎಸೆತಗಳಲ್ಲಿ 1 ರನ್‌ಗೆ 3 ವಿಕೆಟ್ ಕಳೆದುಕೊಂಡು ದಿಢೀರ್ ಕುಸಿತ ಕಂಡ ಆಫ್ರಿಕ ತಂಡಕ್ಕೆ ಆಸರೆಯಾದ ಡಿವಿಲಿಯರ್ಸ್ ಬೌಂಡರಿ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದ ಕ್ವಿಂಟನ್ ಡಿಕಾಕ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್

ನ್ಯೂಝಿಲೆಂಡ್: 34 ಓವರ್‌ಗಳಲ್ಲಿ 207/7

(ವಿಲಿಯಮ್ಸನ್ 59, ಗ್ರಾಂಡ್‌ಹೋಮ್ ಅಜೇಯ 34, ಬ್ರೌನ್ಲಿ 31, ಕ್ರಿಸ್ ಮೊರಿಸ್ 4-62, ರಬಾಡ 2-31)

ದಕ್ಷಿಣ ಆಫ್ರಿಕ: 33.5 ಓವರ್‌ಗಳಲ್ಲಿ 210/6

(ಕ್ವಿಂಟನ್ ಡಿಕಾಕ್ 69,ಎಬಿ ಡಿವಿಲಿಯರ್ಸ್ ಅಜೇಯ 37, ಫೆಲುಕ್ವಾಯೊ ಅಜೇಯ 29, ಸೌಥಿ 2-47)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News