×
Ad

ಅಯ್ಯರ್ ಅಜೇಯ ದ್ವಿಶತಕ ; ಅಭ್ಯಾಸ ಪಂದ್ಯ ಡ್ರಾ

Update: 2017-02-19 23:33 IST

ಮುಂಬೈ, ಫೆ.19: ಇಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ತ್ರಿದಿನ ಅಭ್ಯಾಸ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದ್ದು, ಭಾರತ‘ಎ’ ತಂಡದ ಯುವ ದಾಂಡಿಗ ಶ್ರೇಯಸ್ ಅಯ್ಯರ್ ಅಜೇಯ ದ್ವಿಶತಕದ ಮೂಲಕ ಗಮನ ಸೆಳೆದಿದ್ದಾರೆ.
ಇಲ್ಲಿನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಅಂತಿಮ ದಿನವಾಗಿರುವ ಇಂದು ಅಯ್ಯರ್ 306 ನಿಮಿಷಗಳ ಬ್ಯಾಟಿಂಗ್‌ನಲ್ಲಿ 210 ಎಸೆತಗಳನ್ನು ಎದುರಿಸಿದರು. 27 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಲ್ಲಿ 202 ರನ್ ದಾಖಲಿಸಿ ಅಜೇಯರಾಗಿ ಉಳಿದರು.
 ಮೂರನೆ ದಿನದಾಟದಂತ್ಯಕ್ಕೆ ಭಾರತ‘ಎ’ ತಂಡ ಮೊದಲ ಇನಿಂಗ್ಸ್‌ನಲ್ಲಿ 51 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 176 ರನ್ ಗಳಿಸಿತ್ತು ಅಯ್ಯರ್ 85 ರನ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಅವರು 3 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.
ಇಂದು ಆಟ ಮುಂದುವರಿಸಿದ 22ರ ಹರೆಯದ ಮುಂಬೈ ದಾಂಡಿಗ ಅಯ್ಯರ್ ಆಟ ಆರಂಭಗೊಂಡ 10 ನಿಮಿಷಗಳಲ್ಲಿ ಶತಕ ಪೂರ್ಣಗೊಳಿಸಿದರು. ಆದರೆ ಪಂತ್ ಅವರು 21 ರನ್ ಗಳಿಸಿ ಸ್ಟಿಫನ್ ಒಕೀಫೆ ಅವರಿಗೆ ವಿಕೆಟ್ ಒಪ್ಪಿಸಿದರು.
 ಇಶಾನ್ ಕಿಶನ್ (4) ಅವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಏಳನೆ ವಿಕೆಟ್‌ಗೆ ಅಯ್ಯರ್ ಮತ್ತು ಕರ್ನಾಟಕದ ಕೃಷ್ಣಪ್ಪ ಗೌತಮ್ 138 ರನ್‌ಗಳ ಜೊತೆಯಾಟ ನೀಡಿದರು.
ಕೆ.ಗೌತಮ್ ಆಕರ್ಷಕ 74 ರನ್(83ನಿ, 68ಎ, 10ಬೌ,4ಸಿ) ಗಳಿಸಿ ಔಟಾದರು. ಆಗ ತಂಡದ ಸ್ಕೋರ್ 86,3 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 372 ರನ್ ಗಳಿಸಿತ್ತು. ಬಳಿಕ ಕ್ರೀಸ್‌ಗೆ ಆಗಮಿಸಿದ ಶಹಬಾಝ್ ನದೀಮ್(0) ಖಾತೆ ತೆರೆಯದೆ ಪೆವಿಲಿಯನ್‌ಗೆ ವಾಪಸಾದರು. ಅಶೋಕ್ ದಿಂಡಾ(2) ಮತ್ತು ನವದೀಪ್ ಸೈನಿ(4) ತಂಡದ ಸ್ಕೋರ್‌ನ್ನು 400ರ ಗಡಿ ದಾಟಿಸಲು ನೆರವಾದರು.
ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶತಕ ದಾಖಲಿಸಿದ್ದ ಅಯ್ಯರ್ ಅದೇ ಫಾರ್ಮ್‌ನ್ನು ಮುಂದುವರಿಸಿ ಆಸ್ಟ್ರೇಲಿಯದ ವಿರುದ್ಧ ದ್ವಿಶತಕ ದಾಖಲಿಸಿ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ. ಭಾರತ ‘ಎ’ ಮೊದಲ ಇನಿಂಗ್ಸ್‌ನಲ್ಲಿ 355 ನಿಮಿಷಗಳ ಬ್ಯಾಟಿಂಗ್‌ನಲ್ಲಿ 91.5 ಓವರ್‌ಗಳಲ್ಲಿ 403 ರನ್‌ಗಳಿಗೆ ಆಲೌಟಾಗಿ 66 ರನ್‌ಗಳ ಹಿನ್ನಡೆ ಅನುಭವಿಸಿತು. ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 127 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 469 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
 ಆಸ್ಟ್ರೇಲಿಯದ ಬೌಲರ್‌ಗಳಾದ ನಥಾನ್ ಲಿಯಾನ್ 162ಕ್ಕೆ 4 ವಿಕೆಟ್, ಒಕೀಫೆ 101ಕ್ಕೆ 3, ಜಾಕ್ಸನ್ ಬರ್ಡ್ 60ಕ್ಕೆ 2 ಮತ್ತು ಮಿಷೆಲ್ ಮಾರ್ಷ್ 45ಕ್ಕೆ 1 ವಿಕೆಟ್ ಪಡೆದರು.
ಎರಡನೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯ ಅಗ್ರ ಸರದಿಯ ದಾಂಡಿಗರನ್ನು ಬೇಗನೆ ಕಳೆದುಕೊಂಡಿತು. 160 ನಿಮಿಷಗಳ ಬ್ಯಾಟಿಂಗ್‌ನಲ್ಲಿ 36 ಓವರ್‌ಗಳಲ್ಲಿ 4 ವಿಕೆಟ್‌ನಷ್ಟದಲ್ಲಿ 110 ರನ್ ಗಳಿಸಿದ್ದಾಗ ಉಭಯ ತಂಡಗಳ ನಾಯಕರು ಪಂದ್ಯವನ್ನು ಡ್ರಾಗೊಳಿಸುವ ನಿರ್ಧಾರ ಕೈಗೊಂಡರು.
ಆರಂಭಿಕ ದಾಂಡಿಗರಾದ ಡೇವಿಡ್ ವಾರ್ನರ್ 35 ರನ್, ಮ್ಯಾಥ್ಯೂ ರೆನ್‌ಷಾ 10ರನ್, ಗ್ಲೇನ್ ಮ್ಯಾಕ್ಸ್‌ವೆಲ್ 1ರನ್, ಒಕೇಫೆ 19ರನ್, ಪೀಟರ್ ಹ್ಯಾಂಡ್ಸ್‌ಕಂಬ್ 37 ರನ್, ಮ್ಯಾಥ್ಯೂ ವೇಡ್ ಔಟಾಗದೆ 6 ರನ್ ಗಳಿಸಿದರು.
ಹಾರ್ದಿಕ್ ಪಾಂಡ್ಯ , ಸೈನಿ, ದಿಂಡಾ,ರಿಷಬ್ ಪಂತ್ ತಲಾ 1 ವಿಕೆಟ್ ಹಂಚಿಕೊಂಡರು.
ಸಂಕ್ಷಿಪ್ತ ಸ್ಕೋರ್ ಆಸ್ಟ್ರೇಲಿಯ ಮೊದಲ ಇನಿಂಗ್ಸ್ 127 ಓವರ್‌ಗಳಲ್ಲಿ 469/7 ಡಿಕ್ಲೇರ್
ಭಾರತ ‘ಮೊದಲ ಇನಿಂಗ್ಸ್ ‘ಎ’ 95 ಓವರ್‌ಗಳಲ್ಲಿ ಆಲೌಟ್ 403
(ಅಯ್ಯರ್ ಔಟಾಗದೆ 202, ಗೌತಮ್ 74, ಪಾಂಚಾಲ್ 36; ಲಿಯಾನ್ 162ಕ್ಕೆ 4, ಒಕೀಫೆ 101ಕ್ಕೆ 3).
ಆಸ್ಟ್ರೇಲಿಯ ಎರಡನೆ ಇನಿಂಗ್ಸ್ 36 ಓವರ್‌ಗಳಲ್ಲಿ 110/4(ಹಾಂಡ್ಸ್‌ಕಂಬ್ 37 ವಾರ್ನರ್ 35; ಪಂತ್ 9ಕ್ಕೆ 1ವಿಕೆಟ್).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News