ಮಾಜಿ ಸಿಜೆಐ ಅಲ್ತಮಸ್ ಕಬೀರ್ ನಿಧನ
Update: 2017-02-19 23:54 IST
ಕೋಲ್ಕತಾ, ಫೆ.19: ಸರ್ವೋಚ್ಚ ನ್ಯಾಯಾಲಯದ ಅತ್ಯಂತ ಪ್ರತಿಭಾವಂತ ನ್ಯಾಯಾಧೀಶ ರಲ್ಲೋರ್ವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅಲ್ತಮಸ್ ಕಬೀರ್(68) ಅವರು ಸುದೀರ್ಘ ಅನಾರೋಗ್ಯದ ಬಳಿಕ ಇಂದು ಇಲ್ಲಿಯ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾದರು. 1973ರಲ್ಲಿ ಕೋಲ್ಕತಾದಲ್ಲಿ ನ್ಯಾಯವಾದಿಯಾಗಿ ವೃತ್ತಿಜೀವನ ಆರಂಭಿಸಿದ್ದ ನ್ಯಾ.ಕಬೀರ್ ಕಲ್ಕತ್ತಾ ಜಿಲ್ಲಾ ನ್ಯಾಯಾಲಯದಲ್ಲಿ, ಬಳಿಕ ಕಲ್ಕತ್ತಾ ಉಚ್ಚ ನ್ಯಾಯಾಲಯದಲ್ಲಿ ವೃತ್ತಿಯನ್ನು ನಡೆಸಿದ್ದರು.
ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯವಾದಿಯಾಗಿ ಹೆಸರು ಮಾಡಿದ್ದ ಅವರು 1990ರಲ್ಲಿ ಕಲ್ಕತ್ತಾ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. 2005,ಮಾರ್ಚ್ ನಲ್ಲಿ ಅವರು ಜಾರ್ಖಂಡ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದ್ದರು.
2012,ಸೆ.29ರಂದು ಭಾರತದ 39ನೇ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದ ನ್ಯಾ.ಕಬೀರ್ ಅವರು 2013,ಜು.19ರಂದು ನಿವೃತ್ತರಾಗಿದ್ದರು.