ಕಿಮ್ ಜಾಂಗ್ ನಾಮ್ ಮಗ ಮಲೇಶ್ಯದಲ್ಲಿ? :ಮೃತದೇಹವನ್ನಿಟ್ಟಿರುವ ಆಸ್ಪತ್ರೆಯ ಸುತ್ತ ಸರ್ಪಗಾವಲು
ಕೌಲಾಲಂಪುರ, ಫೆ. 21: ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಅವರ ಸಹೋದರ, ಕಳೆದ ವಾರ ಹತ್ಯೆಗೀಡಾಗಿರುವ ಕಿಮ್ ಜಾಂಗ್ ನಾಮ್ ಅವರ ಮೃತದೇಹವನ್ನು ಪಡೆಯಲು ಅವರ ಮಗ ಕೌಲಾಲಂಪುರಕ್ಕೆ ಬಂದಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಮೃತದೇಹವನ್ನು ಇಟ್ಟಿರುವ ಆಸ್ಪತ್ರೆಯ ಸುತ್ತಲೂ ಮಲೇಶ್ಯದ ಸಶಸ್ತ್ರ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ.
ಮಂಗಳವಾರ ಮುಂಜಾನೆಯ ಹೊತ್ತು ನಾಲ್ಕು ವಾಹನಗಳಲ್ಲಿ ಬಂದ ಸುಮಾರು 30 ಮಲೇಶ್ಯ ಭದ್ರತಾ ಸಿಬ್ಬಂದಿ ಆಸ್ಪತ್ರೆಯ ಆವರಣದ ಮೇಲೆ ನಿಗಾ ಇಟ್ಟರು. ಬಳಿಕ ಬೆಳಗ್ಗೆ ಅವರೆಲ್ಲರೂ ಅಲ್ಲಿಂದ ತೆರಳಿದರು.
ಹಿಂದಿನ ವಾರದ ಸೋಮವಾರ ಕೌಲಾಲಂಪುರ ವಿಮಾನ ನಿಲ್ದಾಣದಲ್ಲಿ ಕಿಮ್ ಜಾಂಗ್ ಉನ್ ಅವರ ತಂದೆಯ ಇನ್ನೊಂದು ಪತ್ನಿಯ ಮಗ ಕಿಮ್ ಜಾಂಗ್ ನಾಮ್ ಅವರನ್ನು ಇಬ್ಬರು ಮಹಿಳೆಯರು ಮುಖಕ್ಕೆ ವಿಷ ಸಿಂಪಡಿಸಿ ಹತ್ಯೆ ಮಾಡಿದ್ದರು.
ಮೃತದೇಹವನ್ನು ತನಗೆ ನೀಡುವಂತೆ ಉತ್ತರ ಕೊರಿಯ ಸರಕಾರ ಮಲೇಶ್ಯ ಸರಕಾರಕ್ಕೆ ಕೋರಿಕೆ ಸಲ್ಲಿಸಿತ್ತು ಹಾಗೂ ಮಲೇಶ್ಯ ಮರಣೋತ್ತರ ಪರೀಕ್ಷೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಈ ಕೋರಿಕೆಯನ್ನು ಮಲೇಶ್ಯ ತಳ್ಳಿ ಹಾಕಿತ್ತು. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಉದ್ವಿಗ್ನತೆ ನೆಲೆಸಿತ್ತು.
ಮೃತದೇಹವನ್ನು ಡಿಎನ್‌ಎ ಮಾದರಿಯೊಂದಿಗೆ ಗುರುತಿಸುವುದಕ್ಕಾಗಿ ಕುಟುಂಬ ಸದಸ್ಯರೊಬ್ಬರು ಬರುವವರೆಗೆ ಅದು ಶವಾಗಾರದಲ್ಲಿರುತ್ತದೆ ಎಂದು ಮಲೇಶ್ಯ ಹೇಳಿತ್ತು.
ಕಿಮ್ ಜಾಂಗ್ ನಾಮ್ ಅವರ ಮಗ ಕಿಮ್ ಹಾನ್-ಸೊಲ್ ಸೋಮವಾರ ಮಕಾವು ದೇಶದಿಂದ ಕೌಲಾಲಂಪುರಕ್ಕೆ ಬರಬೇಕಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ಮತ್ತು ಗುಪ್ತಚರ ಮೂಲಗಳು ಹೇಳಿವೆ.
ಉತ್ತರ ಕೊರಿಯದ ಭೀಕರ ಆಕ್ರಮಣ
ಡಿಎನ್‌ಎ ಮಾದರಿಗಾಗಿ ಮಲೇಶ್ಯ ಸಲ್ಲಿಸಿರುವ ಕೋರಿಕೆಯನ್ನು ಮಲೇಶ್ಯಕ್ಕೆ ಉತ್ತರ ಕೊರಿಯದ ರಾಯಭಾರಿ ಸೋಮವಾರ ‘ಅಸಂಬದ್ಧ’ ಎಂದು ಹೇಳಿ ತಳ್ಳಿಹಾಕಿದ್ದಾರೆ ಹಾಗೂ ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವಾತನ ಮೃತದೇಹವನ್ನು ಪಡೆಯುವ ಹಕ್ಕು ರಾಯಭಾರ ಕಚೇರಿಗಿದೆ ಎಂದು ಹೇಳಿದ್ದಾರೆ.
ಅದೇ ವೇಳೆ, ಹತ್ಯೆ ಬಗ್ಗೆ ಮಲೇಶ್ಯ ಪೊಲೀಸರು ನಡೆಸುತ್ತಿರುವ ತನಿಖೆಯನ್ನು ಉತ್ತರ ಕೊರಿಯದ ರಾಯಭಾರಿ ಕಾಂಗ್ ಚೋಲ್ ಹಾಸ್ಯಾಸ್ಪದ ಎಂದಿದ್ದಾರೆ. ಈ ತನಿಖೆಯು ರಾಜಕೀಯ ಪ್ರೇರಿತವಾಗಿದೆ ಹಾಗೂ ಉತ್ತರ ಕೊರಿಯವನ್ನು ಸಿಕ್ಕಿಸಿಹಾಕಲು ಮಲೇಶ್ಯ ಆರಂಭದಿಂದಲೂ ದಕ್ಷಿಣ ಕೊರಿಯದೊಂದಿಗೆ ಶಾಮೀಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮಲೇಶ್ಯದ ವಿದೇಶ ಸಚಿವ ಅನಿಫಾಹ್ ಅಮನ್, ಉತ್ತರ ಕೊರಿಯದ ಆರೋಪಗಳು ‘ಅತ್ಯಂತ ಅವಮಾನಕರ’ ಎಂದು ಹೇಳಿದ್ದಾರೆ. ‘‘ಅವರ ಆರೋಪಗಳು ಭ್ರಮೆಗಳು, ಸುಳ್ಳುಗಳು ಮತ್ತು ಅರ್ಧ ಸತ್ಯಗಳನ್ನು ಆಧರಿಸಿದೆ’’ ಎಂದು ತಿರುಗೇಟು ನೀಡಿದ್ದಾರೆ.