ನೈಜೀರಿಯ, ಸೋಮಾಲಿಯ, ಯಮನ್‌ನಲ್ಲಿ ವ್ಯಾಪಿಸುತ್ತಿದೆ ಹಸಿವು: ವಿಶ್ವಸಂಸ್ಥೆ
ನ್ಯೂಯಾರ್ಕ್, ಫೆ. 22: ನೈಜೀರಿಯ, ಸೋಮಾಲಿಯ,ಯಮನ್‌ಗಳಲ್ಲಿ ಹಸಿವು ವ್ಯಾಪಕಗೊಂಡಿದೆ ಎಂದು ವಿಶ್ವಸಂಸ್ಥೆ ಮುನ್ನೆಚ್ಚರಿಕೆ ನೀಡಿದೆ. ಸುಮಾರು 14 ಲಕ್ಷಮಕ್ಕಳು ಕಠಿಣ ಪೋಷಕಾಹಾರಕೊರತೆಯಿಂದಾಗಿ ಮರಣದ ಅಂಚಿನಲ್ಲಿದ್ದಾರೆಂದು ಯುನಿಸೆಫ್ ವರದಿಯಲ್ಲಿ ವಿವರಿಸಲಾಗಿದೆ. ದಕ್ಷಿಣ ಸುಡಾನ್ ಕ್ಷಾಮದ ತೆಕ್ಕೆಯಲ್ಲಿದೆ ಎಂದು ವಿಶ್ವಸಂಸ್ಥೆ ಮತ್ತು ಅಲ್ಲಿನ ಸರಕಾರ ಬಹಿರಂಗಪಡಿಸಿದ ಬೆನ್ನಿಗೆ ಹಸಿವಿಗೆ ಸಂಬಂಧಿಸಿದ ಹೊಸ ವರದಿಯನ್ನು ವಿಶ್ವಸಂಸ್ಥೆ ಬಿಡುಗಡೆಗೊಳಿಸಿದೆ.
ನಾಲ್ಕೂವರೆ ಲಕ್ಷ ಮಕ್ಕಳು ಕಳೆದ ಎರಡು ವರ್ಷಗಳಿಂದ ಯುದ್ಧ ನಡೆಯುವ ಯಮನ್, ನೈಜೀರಿಯದಲ್ಲಿ ಪೋಷಕಾಹಾರ ಸಿಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ನೈಜೀರಿಯದ ಬಾರ್ನೋದಲ್ಲಿ ಕಳೆದ ಒಂದು ವರ್ಷಗದಿಂದ ತೀವ್ರ ಕ್ಷಾಮ ಪರಿಸ್ಥಿತಿ ಮುಂದುವರಿಯುತ್ತಿದೆ. ಇಲ್ಲಿಗೆ ಆಹಾರ ತಲುಪಿಸಿಕೊಡಲು ಈವರೆಗೂ ಸ್ವಯಂ ಸೇವ ಸಂಘಟನೆಗಳಿಂದ ಸಾಧ್ಯವಾಗಿಲ್ಲ. ಸೋಮಾಲಿಯದಲ್ಲಿ ಹಸಿವಿನಿಂದ ಎರಡೂವರೆ ಲಕ್ಷ ಮಕ್ಕಳು ನರಳುತ್ತಿದ್ದಾರೆ. ದಕ್ಷಿಣಸುಡಾನ್‌ನಲ್ಲಿ ಶೇ> 20ರಷ್ಟು ಮಂದಿಗೆ ಮಾತ್ರ ಅಗತ್ಯ ಆಹಾರ ಲಭಿಸುತ್ತಿದೆ. ಶೇ. 30ರಷ್ಟು ಮಕ್ಕಳು ಹೆಚ್ಚಿನ ದಿನಗಳಲ್ಲಿ ಹಸಿವು ಅನುಭವಿಸುತ್ತಿದ್ದಾರೆ. ಪ್ರತಿ ಹತ್ತು ಸಾವಿರ ಮಂದಿಯಲ್ಲಿ ಇಬ್ಬರು ಹಸಿವಿಗೀಡಾಗಿ ಮೃತಪಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಸಮಸ್ಯೆ ಪರಿಹಾರಕ್ಕೆ ಅಂತಾರಾಷ್ಟ್ರೀಯ ಸಮುದಾಯ ಶೀಘ್ರ ಮಧ್ಯಪ್ರವೇಶಿಸಬೇಕೆಂದು ಯುನಿಸೆಫ್ ನಿರ್ದೇಶಕ ಆಂಟನಿ ಲೇಕ್ ಆಗ್ರಹಿಸಿದ್ದಾರೆ. ಯುದ್ಧ ಸ್ಥಿತಿ ಮತ್ತು ಇತರ ರಾಜಕೀಯ ಬಿಕ್ಕಟ್ಟುಗಳಿಂದಾಗಿ ಈ ದೇಶಗಳಲ್ಲಿ ಹಸಿವಿನ ಸಮಸ್ಯೆ ಸೃಷ್ಟಿಯಾಗಿದೆ. ಯಮನ್‌ನ ಆಂತರಿಕ ಘರ್ಷಣೆ , ನೈಜೀರಿದ ಬೊಕೊ ಹರಾಮ್‌ನ ಸಶಸ್ತ್ರ ತಂಡಗಳ ಉಪಟಳ ಅಲ್ಲಿನ ಸರಕಾರಕ್ಕೆ ಬರಪರಿಹಾರದಂತಹ ಯೋಜನೆಗೆ ಜಾರಿಗೊಳಿಸಲು ಅಡ್ಡಿಯಾಗಿ ಪರಿಣಮಿಸಿದೆ. ಜಗತ್ತಿನಲ್ಲಿ ಅತ್ಯಂತ ಕೊನೆಯದಾಗಿ ರೂಪುಗೊಂಡ ದೇಶ ದಕ್ಷಿಣ ಸುಡಾನ್ ಆಗಿದೆ. ಅಲ್ಲಿ ಈಗಲೂ ಸಂಘರ್ಷ ಕೊನೆಗೊಂಡಿಲ್ಲ ಎಂದು ವರದಿ ತಿಳಿಸಿದೆ.