ಬಿಗಿಯಾಗುತ್ತಿರುವ ಕುಣಿಕೆ:ಶಂಕಾಸ್ಪದ ನಗದು ಠೇವಣಿಗಳನ್ನು ತೆರಿಗೆ ಅಧಿಕಾರಿಗಳು ಹೇಗೆ ತನಿಖೆಗೊಳಪಡಿಸುತ್ತಾರೆ..?
ಹೊಸದಿಲ್ಲಿ,ಫೆ.22: ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ತನ್ನ‘ಆಪರೇಷನ್ ಕ್ಲೀನ್ ಮನಿ ’ ಅಂಗವಾಗಿ 50 ದಿನಗಳ ನೋಟು ರದ್ದತಿ ಅವಧಿಯಲ್ಲಿ ಐದು ಲಕ್ಷ ರೂ.ಅಧಿಕ ಶಂಕಾಸ್ಪದ ಠೇವಣಿಗಳನ್ನಿರಿಸಿದ್ದ 18 ಲಕ್ಷ ಜನರನ್ನು ಪತ್ತೆ ಹಚ್ಚಿದ್ದು, ಅವರ ಜಾತಕಗಳನ್ನು ಜಾಲಾಡತೊಡಗಿದೆ. ಈ ಸಂಭಾವ್ಯ ಕಪ್ಪುಹಣ ಮತ್ತು ತೆರಿಗೆ ವಂಚನೆಗಳನ್ನು ತೆರಿಗೆ ಅಧಿಕಾರಿಗಳು ತನಿಖೆಗೊಳಪಡಿಸಬಹುದಾದ ನಿರೀಕ್ಷಿತ ವಿಧಾನಗಳು ಇಲ್ಲಿವೆ.
ವ್ಯಕ್ತಿಗತ ಠೇವಣಿಗಳು
►ಅಪ್ರಾಪ್ತ ವಯಸ್ಕರನ್ನು ಹೊರತುಪಡಿಸಿ 2.5 ಲ.ರೂ.ಗಳವರೆಗಿನ ಠೇವಣಿಗಳನ್ನು ಪರಿಶೀಲಿಸಲಾಗುವುದಿಲ ್ಲ(ಇದು ಸದ್ಯಕ್ಕೆ,ಮುಂದೆ ಯಾವ ನಿಯಮ ಬರುತ್ತದೋ ಗೊತ್ತಿಲ್ಲ). 70 ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಹಿರಿಯ ನಾಗರಿಕರ ಐದು ಲ.ರೂ.ವರೆಗಿನ ಠೇವಣಿಗಳಿಗೂ ಯಾವುದೇ ದೃಢೀಕರಣದ ಅಗತ್ಯವಿಲ್ಲ.
►ಕೃಷಿಯಂತಹ ತೆರಿಗೆಮುಕ್ತ ಆದಾಯವಿರುವವರು ಇಟ್ಟಿರುವ ಠೇವಣಿಗಳ ಪ್ರಕರಣಗಳಲ್ಲಿ ಅಧಿಕಾರಿಗಳು ಹಿಂದೆ ಸಲ್ಲಿಸಲಾದ ರಿಟರ್ನ್‌ಗಳೊಂದಿಗೆ ಈ ಠೇವಣಿಗಳನ್ನು ಹೋಲಿಸಿ ನೋಡಲಿದ್ದಾರೆ. ಜಮೀನು ಹಿಡುವಳಿ ಇತ್ಯಾದಿ ವಿವರಗಳನ್ನೂ ಅವರು ಕೇಳಬಹುದು.
►ವ್ಯಕ್ತಿಗಳು ಬ್ಯಾಂಕಿನಿಂದ ಹಿಂಪಡೆದಿರುವ ಮೊತ್ತದ ಅಡ್ಡತನಿಖೆಗಾಗಿ ಆದಾಯ ತೆರಿಗೆ ಅಧಿಕಾರಿಗಳು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಕೇಳಬಹುದು.
►ಮೂರನೇ ಪಾರ್ಟಿಯ ಮೂಲಕ ‘ಉಡುಗೊರೆ ’ರೂಪದಲ್ಲಿ ನಗದು ಹಣ ಪಡೆದಿದ್ದೇವೆ ಎಂದು ಪ್ರತಿಪಾದಿಸುವವರು ತೆರಿಗೆಯನ್ನು ಪಾವತಿಸಬೇಕಾಗಬಹುದು.
►ವ್ಯವಹಾರ ಮಾಡುತ್ತಿರುವವರ ಖಾತೆಯಲ್ಲಿ 2016,ಮಾರ್ಚ್ ಅಂತ್ಯದಲ್ಲಿ ಇದ್ದ ನಗದು ಹಣಕ್ಕಿಂತ ಕಡಿಮೆ ಶಿಲ್ಕು ಇದ್ದರೆ ಹೆಚ್ಚುವರಿ ಮಾಹಿತಿಗಳನ್ನು ಒದಗಿಸುವ ಅಗತ್ಯವಿಲ್ಲ.
ಉದ್ಯಮಗಳು
►ಮಾಸಿಕ ಮಾರಾಟ,ಸ್ಟಾಕ್ ರಜಿಸ್ಟರ್‌ನಲ್ಲಿಯ ಎಂಟ್ರಿಗಳು, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳುವ ಮೂಲಕ ತೆರಿಗೆ ಅಧಿಕಾರಿಗಳು ನಗದು ವಹಿವಾಟು ವಾಡಿಕೆಯಂತಿದೆಯೇ ಎನ್ನುವುದನ್ನು ಪರಿಶೀಲಿಸ ಲಿದ್ದಾರೆ.
►2016,ನವೆಂಬರ್-ಡಿಸೆಂಬರ್ ಅವಧಿಯಲ್ಲಿ ದಿಢೀರ್ ಮಾರಾಟದ ಪ್ರಮಾಣ ಹೆಚ್ಚಾಗಿತ್ತೇ ಎನ್ನುವುದನ್ನು ಪರಿಶೀಲಿಸಲಿರುವ ಅಧಿಕಾರಿಗಳು ಮಾರಾಟದ ಹಿಂದಿನ ದಾಖಲೆಗಳೊಂದಿಗೆ ಹೋಲಿಸಿ ನೋಡಲಿದ್ದಾರೆ.
►ಡಿ.30 ಸಮೀಪವಾಗುತ್ತಿದ್ದಂತೆ ಒಂದಕ್ಕಿಂತ ಹೆಚ್ಚು ಬಾರಿ ಹಳೆಯ ನೋಟುಗಳು ಬ್ಯಾಂಕಿನಲ್ಲಿ ಜಮೆಯಾಗಿದ್ದರೆ ಅದರ ಮೇಲೆ ಅಧಿಕಾರಿಗಳ ಕಾಕದೃಷ್ಟಿ ಬೀಳಬಹುದು.
►ದಾಸ್ತಾನು ಅಲಭ್ಯತೆ ಅಥವಾ ನಕಲಿ ಖರೀದಿಗಳ ಮೂಲಕ ಹೆಚ್ಚಿನ ದಾಸ್ತಾನು ತೋರಿಸುವ ಪ್ರಯತ್ನಗಳೂ ಅಧಿಕಾರಿಗಳ ಗಮನ ಸೆಳೆಯಲಿವೆ.
►ಹಿಂದಿನ ದಾಖಲೆಗಳಲ್ಲಿ ಉಲ್ಲೇಖವಿಲ್ಲದ ಇನ್ನೊಂದು ಉದ್ಯಮ ಸಂಸ್ಥೆ ಅಥವಾ ಖಾತೆಗೆ ಹಣದ ವರ್ಗಾವಣೆಗಳ ಬಗ್ಗೆಯೂ ಅಧಿಕಾರಿಗಳಿಂದ ವಿಚಾರಣೆ ಎದುರಿಬೇಕಾಗಬಹುದು.