ಟ್ರಂಪ್ ವಲಸೆ ಯೋಜನೆ :3 ಲಕ್ಷ ಭಾರತೀಯ ಅಮೆರಿಕನ್ನರ ಮೇಲೆ ಪರಿಣಾಮ

Update: 2017-02-22 13:53 GMT

ವಾಷಿಂಗ್ಟನ್, ಫೆ.22: ಅಮೆರಿಕದ 11 ಮಿಲಿಯನ್ ಅಕ್ರಮ ವಲಸೆಗಾರರನ್ನು ಗಡಿಪಾರುಗೊಳ್ಳುವ ಅಪಾಯಕ್ಕೆ ದೂಡಿರುವ ಟ್ರಂಪ್ ಆಡಳಿತದ ವಲಸೆ ನಿರ್ಧಾರ ಸುಮಾರು 3 ಲಕ್ಷ ಭಾರತೀಯ ಅಮೆರಿಕನ್ನರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಿಲಿಯಗಟ್ಟಲೆ ಅಕ್ರಮ ವಲಸಿಗರ ಸಂಭಾವ್ಯ ಗಡಿಪಾರು ಪ್ರಕ್ರಿಯೆಯ ಬಗ್ಗೆ ಪ್ರಾಥಮಿಕ ರೂಪುರೇಷೆ ಸಿದ್ದಗೊಳಿಸಿದ್ದು , ಸಂಯುಕ್ತ ವಲಸೆ ಕಾನೂನು ಜಾರಿಗೊಳಿಸುವ ಕುರಿತಂತೆ ಹೊಸ ಮಾರ್ಗದರ್ಶಿ ಸೂತ್ರವನ್ನು ಜಾರಿಗೊಳಿಸಿದ್ದಾರೆ. ಇಲಾಖೆಯು ಇನ್ನು ಮುಂದೆ ಗಡಿಪಾರು ಮಾಡಬಹುದಾದ ವಿದೇಶಿಯರನ್ನು ವರ್ಗ ಅಥವಾ ಗುಂಪುಗಳ ಆಧಾರದಲ್ಲಿ ವಿನಾಯಿತಿಗೆ ಪರಿಗಣಿಸುವುದಿಲ್ಲ ಎಂದು ದೇಶೀಯ ಭದ್ರತಾ ಇಲಾಖೆ ಕಳುಹಿಸಿರುವ ಕಡ್ಡಾಯ ಜ್ಞಾಪನ ಪತ್ರದಲ್ಲಿ ತಿಳಿಸಲಾಗಿದೆ.

ವಲಸೆ ನೀತಿ ಉಲ್ಲಂಘಿಸಿದ್ದಾನೆ ಎಂದು ಓರ್ವ ವಿದೇಶಿ ವ್ಯಕ್ತಿಯ ಬಗ್ಗೆ ವಲಸೆ ಅಧಿಕಾರಿಗೆ ನಂಬಲರ್ಹ ಪುರಾವೆ ಸಿಕ್ಕಿದರೆ ಆತನನ್ನು ವಶಕ್ಕೆ ಪಡೆಯಲು ಅಥವಾ ಬಂಧಿಸಲು ಅಧಿಕಾರಿಗೆ ಪೂರ್ಣ ಅಧಿಕಾರವಿದೆ ಎಂದು ಜ್ಞಾಪನ ಪತ್ರ(ಮೆಮೊ)ದಲ್ಲಿ ತಿಳಿಸಲಾಗಿದೆ. ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಕುರಿತಂತೆ ದೇಶೀಯ ಭದ್ರತಾ ಇಲಾಖೆ ಎರಡು ಕಡ್ಡಾಯ ಮೆಮೊಗಳನ್ನು ಜಾರಿಗೊಳಿಸಿದ್ದು ಇದು ಇತರ ವಿಷಯಗಳ ಜೊತೆಗೆ, ಗಡಿಪಾರು ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿಗೊಳಿಸಿದೆ.

ಇಲ್ಲಿ ವಿದೇಶಿ ಪಾತಕಿಗಳ ವಿಷಯಕ್ಕೆ ಹೆಚ್ಚು ಪ್ರಾಧಾನ್ಯತೆಯಿದ್ದರೂ , ಇತರರಿಗೂ ಬಿಸಿ ತಟ್ಟಲಿದೆ. ಅನಧಿಕೃತ ಮೂಲಗಳ ಪ್ರಕಾರ 3 ಲಕ್ಷ ಅಕ್ರಮ ಭಾರತೀಯ ಅಮೆರಿಕನ್ನರ ಮೇಲೆ ಈ ಕಾನೂನು ತೀವ್ರ ಪರಿಣಾಮ ಬೀರಲಿದೆ. ಈ ಮೆಮೊದ ಪ್ರಕಾರ , ಅಮೆರಿಕ ಪ್ರವೇಶಿಸಲು ಸ್ವೀಕಾರಾರ್ಹರಲ್ಲದವರು, ನಂಬಿಕೆಯ ವಾಗ್ದಾನ ನೀಡದ ವಿದೇಶಿಯರನ್ನು ನಿವಾರಿಸುವ ಕ್ರಮವನ್ನು ತ್ವರಿತಗೊಳಿಸಲು ದೇಶೀಯ ಭದ್ರತಾ ಇಲಾಖೆಯ ಕಾರ್ಯದರ್ಶಿಗೆ ಅಧಿಕಾರವಿದೆ. ಆ ವಿದೇಶಿ ವ್ಯಕ್ತಿಯು ಏಕಾಂಗಿ ಅಪ್ರಾಪ್ತ ವಯಸ್ಕನಾಗಿದ್ದರೆ, ಅಥವಾ ಅಮೆರಿಕದಲ್ಲಿ ಆಶ್ರಯ ಕೋರಿ ಅರ್ಜಿ ಸಲ್ಲಿಸಿದ್ದರೆ, ಅಥವಾ ತಮ್ಮ ದೇಶದಲ್ಲಿ ಚಿತ್ರಹಿಂಸೆಗೆ , ಕಿರುಕುಳಕ್ಕೆ ಒಳಗಾಗುವ ಹೆದರಿಕೆಯಿಂದ ಬಂದಿದ್ದರೆ , ಅಥವಾ ಕಾನೂನುಬದ್ಧ ವಲಸಿಗ ಸ್ಥಾನಮಾನ ಇರುವುದಾಗಿ ಹೇಳಿಕೊಳ್ಳುವವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

ವಶಕ್ಕೆ ಪಡೆದುಕೊಳ್ಳಲಾದ ಅಕ್ರಮ ವಿದೇಶಿಯರು ಮುಂದೆ ಮತ್ತೊಮ್ಮೆ ಅಕ್ರಮ ಪ್ರವೇಶಿಸುವ ಅಪಾಯ ಇಲ್ಲ ಎಂದು ಖಚಿತವಾದರೆ ಅವರನ್ನು ಅವರು ಎಲ್ಲಿಂದ ಬಂದರೋ ಅದೇ ರಾಷ್ಟ್ರಕ್ಕೆ ವಾಪಾಸು ಕಳಿಸುವ ಮೂಲಕ , ಸರಕಾರದ ನ್ಯಾಯತೀರ್ಮಾನ ಸಂಪನ್ಮೂಲವನ್ನು ಇತರ ಪ್ರಮುಖ ವಿದೇಶಿಯರತ್ತ ಗಮನ ಹರಿಸಲು ಸಾಧ್ಯವಾಗಿಸಬೇಕು ಎಂದು ಮೆಮೊದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News