ಇಸ್ರೇಲ್-ಫೆಲೆಸ್ತೀನ್ ಸಂಘರ್ಷಕ್ಕೆ ದ್ವಿ-ರಾಷ್ಟ್ರವೇ ಪರಿಹಾರ :ಈಜಿಪ್ಟ್, ಜೋರ್ಡಾನ್ ಪುನರುಚ್ಚಾರ

Update: 2017-02-22 14:23 GMT

ಜಿದ್ದಾ/ಕೈರೋ, ಫೆ. 22: ಇಸ್ರೇಲ್-ಫೆಲೆಸ್ತೀನ್ ಸಂಘರ್ಷ ನಿವಾರಣೆಗೆ ದ್ವಿರಾಷ್ಟ್ರ ಪರಿಹಾರಕ್ಕೆ ತಾವು ನೀಡುತ್ತಿರುವ ಬೆಂಬಲವನ್ನು ಮುಂದುವರಿಸುವುದಾಗಿ ಈಜಿಪ್ಟ್ ಮತ್ತು ಜೋರ್ಡಾನ್ ದೇಶಗಳ ನಾಯಕರು ಹೇಳಿದ್ದಾರೆ.

ದ್ವಿರಾಷ್ಟ್ರ ಪರಿಹಾರವನ್ನು ತಾನು ಬೆಂಬಲಿಸುವುದಿಲ್ಲ ಎಂಬ ಇಂಗಿತವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ನಾಯಕರು ಈ ಹೇಳಿಕೆ ನೀಡಿದ್ದಾರೆ.

ಕೈರೋದಲ್ಲಿ ನಡೆದ ಸಭೆಯೊಂದರಲ್ಲಿ, ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್-ಸಿಸಿ ಮತ್ತು ಜೋರ್ಡಾನ್ ದೊರೆ ಅಬ್ದುಲ್ಲಾ ಮಧ್ಯ ಪ್ರಾಚ್ಯ ಶಾಂತಿ ಪ್ರಕ್ರಿಯೆ ಬಗ್ಗೆ ಪರಸ್ಪರರ ನಿಲುವುಗಳ ಬಗ್ಗೆ ಚರ್ಚೆ ನಡೆಸಿದರು ಎಂದು ಅಲ್-ಸಿಸಿ ಅವರ ಕಚೇರಿ ನೀಡಿದ ಹೇಳಿಕೆಯೊಂದು ತಿಳಿಸಿದೆ.

ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ನೆರವು ನೀಡುವ ಯಾವುದೇ ಪರಿಹಾರವನ್ನು ತಾನು ಸ್ವೀಕರಿಸುತ್ತೇನೆ, ದ್ವಿ-ರಾಷ್ಟ್ರ ಪರಿಹಾರವೇ ಆಗಬೇಕೆಂದೇನಿಲ್ಲ ಎಂಬುದಾಗಿ ಕಳೆದ ವಾರ ಶ್ವೇತಭವನದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾದ ವೇಳೆ ಟ್ರಂಪ್ ಹೇಳಿದ್ದರು.

ಇಸ್ರೇಲ್-ಫೆಲೆಸ್ತೀನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ದಶಕಗಳ ಕಾಲ ಅಮೆರಿಕ ಅನುಸರಿಸಿಕೊಂಡು ಬಂದಿದ್ದ ನೀತಿಗೆ ಟ್ರಂಪ್ ನಿರ್ಧಾರ ವಿರುದ್ಧವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News