ಪಿಣರಾಯಿ ವಿಜಯನ್ ಯಾರು ?

Update: 2017-02-22 15:34 GMT

ಪಿಣರಾಯಿ ವಿಜಯನ್ ಈ ದೇಶದ ಪ್ರಮುಖ ಕಮ್ಯುನಿಸ್ಟ್ ನಾಯಕ. ಸಂಘಪರಿವಾರ ಅವರ ಮಂಗಳೂರು ಭೇಟಿಯನ್ನು ನಿಷೇಧಿಸಲು ಕರೆನೀಡುವ ಮೂಲಕ ಕೇರಳದ ಜನಪ್ರಿಯ ಮುಖ್ಯಮಂತ್ರಿ  ಪಿಣರಾಯಿ ಇಂದು ಎಲ್ಲರ ಕುತೂಹಲದ ಕೇಂದ್ರವಾಗಿದ್ದಾರೆ. ಸಂಘಪರಿವಾರ ಕಾಮ್ರೇಡ್ ಪಿಣರಾಯಿಯವರನ್ನು‌ ಖಳನಾಯಕ ಎಂಬಂತೆ ಚಿತ್ರಿಸುತ್ತಿದೆ. ಆದರೆ ತನ್ನ ಇಡೀ ಜೀವನವನ್ನು ಶೋಷಿತ ಸಮುದಾಯಗಳಿಗಾಗಿ ಮೀಸಲಿಟ್ಟ ಕಾಮ್ರೇಡ್ ಪಿಣರಾಯಿ ಕುರಿತು ಒಂದಿಷ್ಟು ತಿಳಿಯೋಣ ಬನ್ನಿ.

ಪಿಣರಾಯಿ ವಿಜಯನ್ ಹುಟ್ಟಿದ್ದು ಕೇರಳದ ಕಣ್ಣೂರು ಜಿಲ್ಲೆಯ ಪಿಣರಾಯಿ ಎಂಬಲ್ಲಿ. ಶೇಂದಿ ಇಳಿಸುವ ಶೋಷಿತ ಈಳವ (ಬಿಲ್ಲವ) ಜಾತಿಯ  ಬಡ ಕುಟಂಬದಲ್ಲಿ ಹುಟ್ಟಿದ ಪಿಣರಾಯಿ ತಂದೆ ಶೇಂದಿ ಇಳಿಸುವ ಕಾಯಕ ನಡೆಸುತ್ತಿದ್ದರು. ಬಡತನದ ಬೇಗೆಯಲ್ಲಿ ಬೇಯುತ್ತಾ ಗುಡಿಸಲಲ್ಲಿ  ಬೆಳೆದ ಪಿಣರಾಯಿ ಸಹಜವಾಗಿಯೇ  ಬಡತನ, ಹಸಿವಿನ ಬಗ್ಗೆ  ಆಕ್ರೋಶವನ್ನು ತನ್ನೆದೆಯಲ್ಲಿ ಇರಿಸಿಕೊಂಡಿದ್ದರು.

ಇಂತಹ ಬಾಲ್ಯ ಅವರನ್ನು ಆಗತಾನೆ ಬಹಳ ಬಿರುಸಿನಿಂದ ನಡೆಯುತ್ತಿದ್ದ ಕಮ್ಯುನಿಸ್ಟ್ ಚಳವಳಿಯತ್ತ ಸೆಳೆಯಿತು. ಗೇಣಿದಾರರು ಜಮೀನ್ದಾರರ ಶೋಷಣೆಯ ವಿರುದ್ಧ ಕೆಂಬಾವುಟ ಹಿಡಿದು ಸಂಘರ್ಷ ನಡೆಸುತ್ತಿದ್ದ ಕಾಲವದು. ಶೇಂದಿ ಇಳಿಸುವವರ ಕೈಯಲ್ಲೂ ಕೆಂಬಾವುಟಗಳು ರಾರಾಜಿಸುತ್ತಿತ್ತು. ಸ್ವತಹ ಗೇಣಿದಾರ, ಶೇಂದಿ ಇಳಿಸುವ ಕುಟುಂಬದ ಪಿಣರಾಯಿ ಪ್ರಾಥಮಿಕ ಶಾಲೆಗೆ ಹೋಗುತ್ತಿರುವಾಗಲೇ ಮೆರವಣಿಗೆಗಳಲ್ಲಿ ಭಾಗವಹಿಸತೊಡಗಿದರು.

ಹೈಸ್ಕೂಲ್ ತಲುಪುವಾಗ ಇವರೊಬ್ಬ ವಿದ್ಯಾರ್ಥಿ ನಾಯಕರಾಗಿ ರೂಪುಗೊಂಡಿದ್ದರು. ಹನ್ನೊಂದನೇ ತರಗತಿ ಓದುತ್ತಿರುವಾಗಲೇ ಬಡತನ ಇವರ ಶಿಕ್ಷಣವನ್ನು ಮೊಟಕುಗೊಳಿಸಿತು. ಆ ನಂತರ ದಿನೇಶ್ ಬೀಡಿ ಕಂಪೆನಿಯಲ್ಲಿ ಕಾರ್ಮಿಕರಿಗೆ ದೇಶಾಭಿಮಾನಿ ಪತ್ರಿಕೆ ಓದಿಹೇಳುವ ಕೆಲಸಕ್ಕೆ ಸೇರಿದ ಪಿಣರಾಯಿ ಅಲ್ಲಿನ ಕಾರ್ಮಿಕರ ಪ್ರೀತಿಯ ಕಾಮ್ರೇಡ್ ಆದರು. ದಿನೇಶ್ ಬೀಡಿ ಕಾರ್ಮಿಕರ ಯೂನಿಯನ್ ಪಿಣರಾಯಿ ಶಿಕ್ಷಣದ ಜವಾಬ್ದಾರಿ ಹೊತ್ತುಕೊಂಡು ಶಿಕ್ಷಣ ಮುಂದುವರಿಸುವಂತೆ ಮಾಡುತ್ತದೆ.

ಆ ನಂತರ ಪಿಣರಾಯಿ ವಿಜಯನ್ ಅವರದ್ದು ಸಂಘರ್ಷದ ಚರಿತ್ರೆ. ಪಿಣರಾಯಿಯಲ್ಲಿ  ಹುಟ್ಟಿದ ಈಳವ (ಬಿಲ್ಲವ) ಜಾತಿ ಕೇರಳದ ಶ್ರೇಣೀಕೃತ ಜಾತಿವ್ಯವಸ್ಥೆಯಲ್ಲಿ ತೀರಾ ಕೆಳಹಂತದಲ್ಲಿತ್ತು. ಈ ಜಾತಿಯ ಜನ ಅಸ್ಪೃಶ್ಯರಾಗಿದ್ದರು. ಇವರ ಜಾತಿಯ ಹೆಣ್ಣುಮಕ್ಕಳಿಗೆ ಎದೆಯ ಮೇಲೆ ಬಟ್ಟೆ ಧರಿಸುವ ಹಕ್ಕು ನಿರಾಕರಿಸಲಾಗಿತ್ತು. ರವಿಕೆ ತೊಡಲು ಆ ಹೆಣ್ಣುಮಕ್ಕಳು ಮೇಲ್ಜಾತಿ ನಂಬೂದರಿಗಳಿಗೆ ತೆರಿಗೆ ಪಾವತಿಸಬೇಕಿತ್ತು. ಇಂತಹ ಅಸಮಾನತೆಯ ವಿರುದ್ಧ  ಕೇರಳದಲ್ಲಿ ಸಾಮಾಜಿಕ ಚಳವಳಿ ನಡೆಸಿದ್ದು ಮಹಾನ್ ಮಾನವತಾವಾದಿ ಬ್ರಹ್ಮರ್ಷಿ ನಾರಾಯಣ ಗುರುಗಳು. ಇವರ ಪರಿವರ್ತನಾ ಚಳವಳಿ ಕೇರಳದ ಈಳವ\ಬಿಲ್ಲವ ಸಮಾಜದಲ್ಲಿ ದೊಡ್ಡ ಪರಿವರ್ತನೆಯನ್ನು ಮೂಡಿಸಿತು‌ ಜಾಗೃತಿಗೆ ಕಾರಣವಾಯಿತು.

ನಾರಾಯಣಗುರುಗಳು ಆರಂಭಿಸಿದ ಸಾಮಾಜಿಕ ಅಸಮಾನತೆಯ ವಿರುದ್ಧದ ಹೋರಾಟವನ್ನು ಅವರ ನಂತರ ಮುಂದುವರಿಸಿದ್ದು ಅದನ್ನು ಆರ್ಥಿಕ ಅಸಮಾನತೆಯ ಜೊತೆಗೆ ಜೋಡಿಸಿದ್ದು ಕೇರಳದ ಕಮ್ಯುನಿಸ್ಟ್ ಚಳವಳಿ. ಇಂತಹ ಕಮ್ಯುನಿಸ್ಟ್ ಚಳವಳಿಗೆ ನಾರಾಯಣ ಗುರುಗಳ ಬಿಲ್ಲವ ಜಾತಿಯ ಕೊಂಡಿಗಳಾಗಿ ಸೇರ್ಪಡೆಯಾದದ್ದು ಕೇರಳದ ಮಾಜಿ ಮುಖ್ಯಮಂತ್ರಿ ಕಾಮ್ರೇಡ್ ಅಚ್ಯುತಾನಂದನ್ ಮತ್ತು ಕಾಮ್ರೇಡ್ ಪಿಣರಾಯಿ ವಿಜಯನ್.

ಕಾಮ್ರೇಡ್ ವಿಜಯನ್  ಈ ಬಡವ ಶ್ರೀಮಂತರ ಮಧ್ಯದ ಸಂಘರ್ಷದಲ್ಲಿ ಒಮ್ಮೆಯೂ ನೆಮ್ಮದಿಯ ದಿನಗಳನ್ನು ಕಂಡವರಲ್ಲ. ಹದಿಹರೆಯದಲ್ಲೇ ಕಮ್ಯುನಿಸ್ಟ್ ಪಕ್ಷದ ಪೂರ್ಣಾವಧಿ ಕಾರ್ಯಕರ್ತರಾದ ಇವರು ಹೋರಾಟದ ದಾರಿಯಲ್ಲಿ ತಿಂದ ಪೆಟ್ಟು, ಕಂಡ ಜೈಲುಗಳಿಗೆ ಲೆಕ್ಕ ಇಟ್ಟವರಿಲ್ಲ. ಪೊಲೀಸರಿಂದ ಪಿಣರಾಯಿ ಅನುಭವಿಸಿದ ಚಿತ್ರಹಿಂಸೆಗಳ ಬಗ್ಗೆ ಕೇಳಿದರೆ ಸಾಮಾನ್ಯನೊಬ್ಬ ನಡುಗಿ ಹೋದಾನು.

ಇಂತಹ ಸಂಘರ್ಷ, ಹೋರಾಟದಿಂದ ಹಂತಹಂತವಾಗಿ ಬೆಳೆದ ಪಿಣರಾಯಿ ಇಂದು ಇಂಡಿಯಾದ ಕಮ್ಯುನಿಸ್ಟ್ ಚಳವಳಿಯ ಪ್ರಮುಖ ನಾಯಕ, ಕೇರಳದ ಮುಖ್ಯಮಂತ್ರಿ. ಈ ಬೆಳವಣಿಗೆಯ ಹಾದಿಯಲ್ಲಿ ತನ್ನ ಬಾಲ್ಯದ ಹಸಿವು, ಶೇಂದಿ ಇಳಿಸುವ ಕುಟುಂಬದ ಬಡತನ, ಸಾಮಾಜಿಕ ಅವಮಾನಗಳನ್ನು ಮರೆತಿಲ್ಲ. ಕಮ್ಯುನಿಸ್ಟ್ ಮೌಲ್ಯಗಳಿಗೆ ಬದ್ಧರಾಗಿ ಪಕ್ಷ ನೀಡುವ ವೇತನದಲ್ಲೇ ಬದುಕು ಸಾಗಿಸಿದ ಇವರ ಮಡದಿ ಸರಕಾರಿ ಶಾಲೆಯ ಶಿಕ್ಷಕಿ. ಗಂಡ ಕೇರಳದ ಮಹಾನ್ ನಾಯಕನಾಗಿ ಬೆಳೆದು ನಿಂತರೂ ಕುಟುಂಬಕ್ಕೆ ಆದಾಯದ ಮೂಲ ಪಕ್ಷ ನೀಡುವ ವೇತನ ಮತ್ತು ಶಿಕ್ಷಕಿ ಮಡದಿಯ ಸಂಬಳ.

ಮುಖ್ಯಮಂತ್ರಿಯಾದ ನಂತರವೂ ಕೇರಳದ ಶ್ರೀಮಂತರು, ಉದ್ಯಮ ವಲಯದ ಜೊತೆಗೆ ಖಾಸಗಿ ಗೆಳೆತನಕ್ಕೆ ಅವಕಾಶ ನೀಡದೆ ಸದಾ ಬಡವರ, ಜನಸಾಮಾನ್ಯರ ಕುರಿತು ಚಿಂತಿಸುತ್ತಾ, ಪಕ್ಷದ ಸಂಗಾತಿಗಳ ಸಾಂಗತ್ಯದಲ್ಲೇ ಸುಖ ಕಾಣುವ ಪಿಣರಾಯಿ ವಿಜಯನ್ ಈ ದೇಶಕ್ಕೆ ಇಂದಿನ ಕಾಲದಲ್ಲಿ ಮಾದರಿ ಆಗಬೇಕಾದ ಜನನಾಯಕ.

ಇಂತಹ ಜನನಾಯಕನ ವ್ಯಕ್ತಿತ್ವಕ್ಕೆ ಮಸಿ ಹಚ್ಚಲು ಸದಾ ಇಲ್ಲಿನ ಶ್ರೀಮಂತರ, ಬಂಡವಾಳಗಾರರ ಹಿತ ಕಾಪಾಡುವ ಸಂಘಪರಿವಾರ ಯತ್ನಿಸುತ್ತಿದೆ. ಬಿಲ್ಲವ ಸಮುದಾಯದ ಶೇಂದಿ ಇಳಿಸುವವರ ಮಗನೊಬ್ಬ ಮುಖ್ಯಮಂತ್ರಿಯಾಗುವುದು, ಪ್ರಾಮಾಣಿಕ ಆಡಳಿತ,  ಸಾಮಾಜಿಕವಾಗಿ ತುಳಿತಕ್ಕೊಳಗಾದವರ ಧ್ವನಿಯಾಗಿ ನಿಲ್ಲುವುದು ಬ್ರಾಹ್ಮಣ್ಯ ಸಿದ್ದಾಂತವಾದಿಗಳಾದ ಸಂಘಪರಿವಾರ ಬಿಜೆಪಿಗಳಿಗೆ ಸಹಿಸಲಾಗುತ್ತಿಲ್ಲ‌ ‌. ಪಿಣರಾಯಿಯ ಆಗಮನ ಕರಾವಳಿಯಲ್ಲಿ ವ್ಯಾಪಕವಾಗಿರುವ ಶೋಷಿತ ಸಮುದಾಯಗಳ ಗಮನ ಅತ್ತ ಹರಿಯಬಹುದು ಎಂಬ ಆತಂಕ ಸಂಘಪರಿವಾರದ್ದು.

ಆ ಕಾರಣಕ್ಕೆ ಪಿಣರಾಯಿ ವಿಜಯನ್ ಮೇಲೆ ಇಲ್ಲಸಲ್ಲದ ಆರೋಪವನ್ನು ಹೊರಿಸಿ, ಬಂದ್ ಆಚರಿಸಿ ಜನರನ್ನು ದಿಕ್ಕುತಪ್ಪಿಸಲು ನೋಡುತ್ತಿದೆ‌. ತುಳುನಾಡಿನ ಜನ ಇಂತಹ ಮೋಸದಾಟಗಳಿಗೆ ಬಲಿಬೀಳಬಾರದು. ಪಿಣರಾಯಿ ವಿಜಯನ್ ಅವರ ತ್ಯಾಗಪೂರ್ಣ ಬದುಕಿಗೆ ಗೌರವವನ್ನು ಸಲ್ಲಿಸುವ ಅವಕಾಶವನ್ನು ಕಳಕೊಳ್ಳಬಾರದು.

ಬನ್ನಿ... ಸಂಘಪರಿವಾರದ ಕುತಂತ್ರವನ್ನು ವಿಫಲಗೊಳಿಸೋಣ, ಸೌಹಾರ್ದ ರ‌್ಯಾಲಿಯಲ್ಲಿ  ಅವರೊಂದಿಗೆ ಹೆಜ್ಜೆಹಾಕೋಣ, ಶೋಷಿತ ಸಮುದಾಯಗಳ ಪರವಾಗಿ ಗೌರವ ಸಲ್ಲಿಸೋಣ.

#wellcome_pinarayi #ಐಕ್ಯತಾರ‌್ಯಾಲಿ  #ಸೌಹರ್ದತೆ_ಉಳಿಯಲಿ

Writer - ಮುನೀರ್ ಕಾಟಿಪಳ್ಳ

contributor

Editor - ಮುನೀರ್ ಕಾಟಿಪಳ್ಳ

contributor

Similar News