×
Ad

ಹೆದ್ದಾರಿಯಲ್ಲಿ ಇಳಿದು ದಾರಿ ಮಾಹಿತಿ ಕೇಳಿದ ಹೆಲಿಕಾಪ್ಟರ್ !

Update: 2017-02-23 00:05 IST

ಅಸ್ತಾನ, ಫೆ. 22 : ಹೆದ್ದಾರಿಯಲ್ಲಿ ಹೋಗುತ್ತಿರುವಾಗ ನೀವು ಏನನ್ನು ನಿರೀಕ್ಷಿಸುತ್ತೀರಿ ? ಒಂದರ ಹಿಂದೆ ಒಂದು ವೇಗವಾಗಿ ಹೋಗುತ್ತಿರುವ ವಾಹನಗಳು, ಹೆದ್ದಾರಿಯ ಎರಡೂ ಬದಿಗಳಲ್ಲಿ ಆಯಾ ಪ್ರದೇಶಕ್ಕೆ ತಕ್ಕಂತೆ ಕಾಡು, ಮರುಭೂಮಿ, ನದಿ ಇತ್ಯಾದಿ, ಇತ್ಯಾದಿಗಳ ದೃಶ್ಯ. ... ಮತ್ತಿನ್ನೇನು ಇರುತ್ತವೆ ಹೆದ್ದಾರಿಯೊಂದರಲ್ಲಿ ? ಹೆಲಿಕಾಪ್ಟರ್ !? 

ಹೌದು, ಹೆಲಿಕಾಪ್ಟರ್ . ಯಾವುದಾದರೂ ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ನಿಮ್ಮ ಮುಂದೆ ಹೆಲಿಕಾಪ್ಟರ್ ಒಂದು ಬಂದು ನಿಲ್ಲುವುದನ್ನು ನೀವು ನಿರೀಕ್ಷಿಸುತ್ತೀರಾ ? ಕಝಕಿಸ್ತಾನದಲ್ಲಿ ಇದ್ದರೆ ಖಂಡಿತ ನಿರೀಕ್ಷಿಸಬಹುದು. ಏಕೆಂದರೆ ಅಲ್ಲಿ  ಹಾಗೇ ಆಗಿದೆ. 

ಅಲ್ಲಿನ ಹಿಮದಿಂದ ಆವೃತ್ತ ಹೆದ್ದಾರಿಯೊಂದರಲ್ಲಿ ಲಾರಿಯೊಂದರ ಮುಂದೆ ಮಿಲಿಟರಿ ಹೆಲಿಕಾಪ್ಟರ್ ಒಂದು ಬಂದು ಇಳಿದಿದೆ. ಸಾಲದ್ದಕ್ಕೆ ಅದು ರಾಕೆಟ್ ಪಾಡ್ ಗಳಿರುವ ಎಂ ಐ 8 ಹೆಲಿಕಾಪ್ಟರ್ ! ಹೇಗಾಗಬೇಡ ಲಾರಿಯಲ್ಲಿದ್ದವನಿಗೆ ? 

ಆದರೆ ಅಂತಹದ್ದೇನಾಗಿಲ್ಲ. ಹೆಲಿಕಾಪ್ಟರ್ ನಿಂದ ಕೆಳಗಿಳಿದು ಬಂದ ವ್ಯಕ್ತಿಯೊಬ್ಬ ಲಾರಿಯವನ ಕೈಕುಲುಕಿ ದಾರಿಯ ಕುರಿತು ಮಾಹಿತಿ ಕೇಳಿದ್ದಾನೆ. ಮಾಹಿತಿ ಪಡೆದ ವ್ಯಕ್ತಿ ಹೆಲಿಕಾಪ್ಟರ್ ಅನ್ನು ಅಲ್ಲಿಂದ ಹಾರಿಸಿ ಮುಂದೆ ಹೋಗಿದ್ದಾನೆ ( ಹೆದ್ದಾರಿಯಲ್ಲೇ ಮುಂದೆ ಹೋಗಿಲ್ಲ !).  

ಇದು ಪೈಲಟ್ ಟ್ರೈನಿಗಳು ಇದ್ದ ಹೆಲಿಕಾಪ್ಟರ್ ಹೀಗೆ ಬಂದು ಇಳಿದಿದ್ದು ಎಂದು ಖಜಕಿಸ್ತಾನದ ರಕ್ಷಣಾ ಸಚಿವಾಲಯದ ಪ್ರಕಟಣೆಯಿಂದ ಬಳಿಕ ಸ್ಪಷ್ಟವಾಯಿತು. ಆ ಹೆಲಿಕಾಪ್ಟರ್ ಸುರಕ್ಷಿತವಾಗಿ ತನ್ನ ತಾಣಕ್ಕೆ ತಲುಪಿದೆ ಎಂಬ ಮಾಹಿತಿಯೂ ಸರ್ಕಾರದಿಂದ ಬಂತು. 
ಅದರ ವೀಡಿಯೊ ಇಲ್ಲಿದೆ ನೋಡಿ : 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News