×
Ad

ಮಕ್ಕಳ ಅಕ್ರಮ ಸಾಗಾಟ ಜಾಲದ ಜತೆ ಪಶ್ಚಿಮ ಬಂಗಾಳ ಬಿಜೆಪಿ ನಾಯಕಿಗೆ ನಂಟು!

Update: 2017-02-23 08:58 IST

ಕೊಲ್ಕತ್ತಾ, ಫೆ.23: ಮಕ್ಕಳ ಅಕ್ರಮ ಸಾಗಾಟ ಜಾಲದ ಜತೆ ಪಶ್ಚಿಮ ಬಂಗಾಳ ಬಿಜೆಪಿ ನಾಯಕಿ ನಂಟು ಹೊಂದಿರುವ ಪ್ರಕರಣ ಬಯಲಾಗಿದೆ. ಸ್ವಯಂಸೇವಾ ಸಂಸ್ಥೆಯ ಜತೆ ಸೇರಿ ಮಕ್ಕಳನ್ನು ದತ್ತು ನೀಡುವ ನೆಪದಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಸಿಐಡಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಮುಖಂಡೆ ಜೂಹಿ ಚೌಧರಿ ಅವರ ಹೆಸರನ್ನೂ ಸೇರಿಸಲಾಗಿದೆ. ಈ ಸಂಬಂಧ ಬಿಮಲಾ ಶಿಶುಗೃಹ ಎಂಬ ಸ್ವಯಂಸೇವಾ ಸಂಸ್ಥೆಯ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದೆ. ಅಧ್ಯಕ್ಷೆ ಚಂದನಾ ಚಕ್ರವರ್ತಿ ಹಾಗೂ ಮುಖ್ಯ ದತ್ತು ಅಧಿಕಾರಿ ಸೋನಾಲಿ ಮಂಡಲ್ ಅವರನ್ನು ಉತ್ತರ ಬಂಗಾಳದ ಜಲಪೈಗುರಿಯಲ್ಲಿ ಬಂಧಿಸಲಾಗಿದೆ.

ಈ ಮಕ್ಕಳ ಕಳ್ಳಸಾಗಣೆ ಜಾಲ ಸುಮಾರು 25 ಮಕ್ಕಳನ್ನು ಭಾರತದ ವಿವಿಧ ನಗರಗಳು, ಅಮೆರಿಕ ಹಾಗೂ ಫ್ರಾನ್ಸ್‌ಗೆ ಮಾರಾಟ ಮಾಡಿದೆ ಎಂದು ಸಿಐಡಿ ಮೂಲಗಳು ಹೇಳಿವೆ. ಈ ಬಗ್ಗೆ ಜೂಹಿ ಚೌಧರಿಯವರ ಪ್ರತಿಕ್ರಿಯೆ ಕೇಳಿದಾಗ, "ಚಂದನಾ ಚೌಧರಿ ಒಂದು ಬಾರಿ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿ ನನ್ನ ಬಳಿಗೆ ಬಂದಿದ್ದರು. ಆಗ ನಾನು ಅಗತ್ಯ ವೇದಿಕೆಯನ್ನು ಸಂಪರ್ಕಿಸಿ ದೂರು ನೀಡುವಂತೆ ಸಲಹೆ ನೀಡಿದ್ದೆ" ಎಂದು ಹೇಳಿದ್ದಾರೆ. ಆದರೆ ನಂತರ ಈ ಬಗ್ಗೆ ವಿವರಣೆ ಕೇಳಲು ಬಿಜೆಪಿ ನಾಯಕಿ ಲಭ್ಯರಿಲ್ಲ.

ಆದರೆ ಬಿಜೆಪಿ ನಾಯಕಿ ಹಾಗೂ ಚಂದನಾ ಚೌಧರಿ ಹಲವು ಬಾರಿ ಭೇಟಿಯಾಗಿದ್ದಾರೆ, ಅವರನ್ನು ದಿಲ್ಲಿಗೆ ಕರೆದೊಯ್ದು ಕೇಂದ್ರ ಸರ್ಕಾರಿ ಅಧಿಕಾರಿಗಳನ್ನೂ ಸ್ವಯಂಸೇವಾ ಸಂಸ್ಥೆಗೆ ಪರಿಚಯಿಸಿದ್ದಾರೆ ಎಂದು ಸಿಐಡಿ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News