×
Ad

ಉಗ್ರರ ಹೊಂಚು ದಾಳಿ: ಮೂವರು ಯೋಧರು ಹುತಾತ್ಮ

Update: 2017-02-23 10:19 IST

ಶ್ರೀನಗರ, ಫೆ.23: ಇತ್ತೀಚೆಗಿನ ದಿನಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆದ ಅತ್ಯಂತ ದೊಡ್ಡ ಉಗ್ರಗಾಮಿಗಳ ದಾಳಿಯೊಂದರಲ್ಲಿ ಮೂವರು ಸೈನಿಕರು ಹುತಾತ್ಮರಾದರೆ, ನಾಲ್ವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಶೋಪಿಯಾನ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗಿನ ಜಾವ ಉಗ್ರಗಾಮಿಗಳು ಹೊಂಚು ದಾಳಿ ನಡೆಸಿದ್ದು, ಭಾರತೀಯ ಸೈನಿಕರು ಹಾಗೂ ಉಗ್ರಗಾಮಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಗ್ರಾಮವೊಂದರ ಓರ್ವ ಮಹಿಳೆಯೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

44 ರಾಷ್ಟ್ರೀಯ ರೈಫಲ್ಸ್‌ನ ಯೋಧರು ಬುಧವಾರ ತಡರಾತ್ರಿ ಮಾಟ್ರಿಗಮ್ ಹಳ್ಳಿಯಲ್ಲಿ ಗಸ್ತು ನಡೆಸಿ ವಾಪಸಾಗುತ್ತಿದ್ದ ವೇಳೆ ಬೆಳಗ್ಗೆ 2:30ರ ಸುಮಾರಿಗೆ ಶಸ್ತ್ರಸಜ್ಜಿತ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಸೈನಿಕರು ಪ್ರತಿದಾಳಿ ನಡೆಸಿದ್ದು, ಸುಮಾರು ಒಂದು ಗಂಟೆ ಕಾಲ ಗುಂಡಿನಕಾಳಗ ನಡೆದಿತ್ತು. ಉಗ್ರರು ಕತ್ತಲಲ್ಲಿ ಪಾರಾಗಲು ಯಶಸ್ವಿಯಾಗಿದ್ದಾರೆ. ದಾಳಿಕೋರ ಉಗ್ರರ ಶೋಧಕ್ಕಾಗಿ ಕೂಂಬಿಂಗ್ ಕಾರ್ಯಾಚರಣೆಗೆ ಹೆಚ್ಚುವರಿ ಪಡೆಗಳನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ.

ದಾಳಿಯ ವೇಳೆ ಓರ್ವ ಯೋಧ ಸ್ಥಳದಲ್ಲೆ ಹುತಾತ್ಮರಾದರು. ಗಾಯಗೊಂಡಿರುವ ಇತರ ಯೋಧರು ಹಾಗೂ ಓರ್ವ ಅಧಿಕಾರಿಯ ಸ್ಥಿತಿ ಗಂಭೀರವಾಗಿದೆ. ಎಲ್ಲರನ್ನು ಶ್ರೀನಗರಕ್ಕೆ ತಂದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ವೃದ್ದೆ ಮಹಿಳೆಯೊಬ್ಬರು ಗುಂಡು ತಗಲಿ ಸಾವನ್ನಪ್ಪಿದ್ದಾರೆ. ನನ್ನ ಅಮ್ಮ ರಾತ್ರಿ ವೇಳೆ ಗುಂಡಿನ ಶಬ್ಬ ಕೇಳಿ ಎದ್ದಿದ್ದರು. ನಾನು ಅವರು ಎಲ್ಲಿದ್ದಾರೆಂದು ನೋಡಲು ಹೋದಾಗ ಅವರು ಗುಂಡು ತಗಲಿ ಮೃತಪಟ್ಟಿದ್ದರು ಎಂದು ಮೃತ ವೃದ್ಧ ಮಹಿಳೆ ಜಾನಾ ಬೇಗಂ ಪುತ್ರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News