ಮೊದಲ ಟೆಸ್ಟ್: ಆಸ್ಟ್ರೇಲಿಯ 9 ವಿಕೆಟ್‌ಗಳ ನಷ್ಟಕ್ಕೆ 256 ರನ್

Update: 2017-02-23 11:43 GMT

ಪುಣೆ, ಫೆ.23: ವಿಶ್ವದ ಎರಡು ಅಗ್ರಮಾನ್ಯ ಟೆಸ್ಟ್ ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯ ನಡುವೆ ಮೊದಲ ಟೆಸ್ಟ್ ಪಂದ್ಯ ಗುರುವಾರ ಇಲ್ಲಿ ಆರಂಭವಾಗಿದ್ದು, ಆಸೀಸ್ ತಂಡ ಮೊದಲ ದಿನದಾಟದಂತ್ಯಕ್ಕೆ 9 ವಿಕೆಟ್‌ಗಳ ನಷ್ಟಕ್ಕೆ 256 ರನ್ ಗಳಿಸಿದೆ.

ಬಾರ್ಡರ್-ಗವಾಸ್ಕರ್ ಟೋಫಿಗಾಗಿ ಉಭಯ ತಂಡಗಳ ನಡುವೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಟಾಸ್ ಜಯಿಸಿದ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.

ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ರೆನ್‌ಶಾ ಮೊದಲ ವಿಕೆಟ್‌ಗೆ 82 ರನ್ ಗಳಿಸಿ ಉತ್ತಮ ಆರಂಭ ನೀಡಿದ್ದರು. ಆದರೆ, ಕೆಳ ಕ್ರಮಾಂಕದಲ್ಲಿ ಮಿಚೆಲ್ ಸ್ಟಾರ್ಕ್(ಅಜೇಯ 57) ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಗಳಿಸಲು ವಿಫಲರಾದರು.

ನಾಯಕ ಸ್ಮಿತ್(27),ಹ್ಯಾಂಡ್ಸ್‌ಕಾಂಬ್(22) ಎರಡಂಕೆ ಸ್ಕೋರ್ ದಾಖಲಿಸಿದರು. ಉಳಿದವರು ವೇಗದ ಬೌಲರ್ ಉಮೇಶ್ ಯಾದವ್(4-32), ಆರ್.ಅಶ್ವಿನ್(2-59) ಹಾಗೂ ರವೀಂದ್ರ ಜಡೇಜ(2-74) ದಾಳಿಗೆ ಸಿಲುಕಿ ದಿನದಾಟದಂತ್ಯಕ್ಕೆ 256ರನ್‌ಗೆ 9 ವಿಕೆಟ್ ಕಳೆದುಕೊಂಡಿತು.

ಮಾರ್ಷ್‌ರೊಂದಿಗೆ ಹೇಝಲ್‌ವುಡ್(1) ಕ್ರೀಸ್ ಕಾಯ್ದುಕೊಂಡಿದ್ದಾರೆ. 77 ಎಸೆತಗಳಲ್ಲಿ 6 ಬೌಂಡರಿಗಳನ್ನು ಒಳಗೊಂಡ 38 ರನ್ ಗಳಿಸಿದ್ದ ಡೇವಿಡ್ ವಾರ್ನರ್‌ರನ್ನು ಕ್ಲೀನ್ ಬೌಲ್ಡ್ ಮಾಡಿದ ಉಮೇಶ್ ಯಾದವ್ ಭಾರತಕ್ಕೆ ಆರಂಭಿಕ ಮೇಲುಗೈ ಒದಗಿಸಿಕೊಟ್ಟರು.

36 ರನ್ ಗಳಿಸಿದ್ದ ರೆನ್‌ಶಾ ಗಾಯಾಳು ನಿವೃತ್ತಿಯಾದರು. ತಂಡ 6 ವಿಕೆಟ್‌ಗೆ 190 ರನ್ ಗಳಿಸಿದ್ದಾಗ ಕ್ರೀಸ್‌ಗೆ ವಾಪಸಾದ ರೆನ್‌ಶಾ 156 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್‌ಗಳಿರುವ 68 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News