×
Ad

ಮುಂಬೈ ಮಹಾನಗರಪಾಲಿಕೆ ಚುನಾವಣೆ : ಶಿವಸೇನೆ, ಬಿಜೆಪಿ ಮೇಲುಗೈ, ಕಾಂಗ್ರೆಸ್‌ಗೆ ಮುಖಭಂಗ

Update: 2017-02-23 21:20 IST

ಮುಂಬೈ,ಫೆ.23: ದೇಶದ ಗಮನಸೆಳೆದ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೇನೆ 84 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅತ್ಯಂತ ನಿಕಟ ಸ್ಪರ್ಧೆ ನೀಡಿರುವ ಬಿಜೆಪಿಗೆ 82   ಸ್ಥಾನಗಳು ದೊರೆತಿದ್ದು, ಶಿವಸೇನೆಗಿಂತ ಕೇವಲ ಎರಡು ಸ್ಥಾನಗಳಷ್ಟು ಹಿಂದಿದೆ. ರಾಜ್ಯದ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್‌ಗೆ ಭಾರೀ ಮುಖಭಂಗವಾಗಿದ್ದು, ಕೇವಲ 31 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಎನ್‌ಸಿಪಿಗೆ 9 ಹಾಗೂ ರಾಜ್‌ಠಾಕ್ರೆ ನೇತೃತ್ವದ ಎಂಎನ್‌ಎಸ್ ಪಕ್ಷವು 7 ಸ್ಥಾನಗಳು ದೊರೆತಿದ್ದು, ನೀರಸ ಸಾಧನೆ ಮಾಡಿವೆ.

ಉಳಿದಂತೆ ಎಐಎಂಐಎಂ-3, ಎಸ್‌ಪಿ-6, ಅಖಿಲ ಭಾರತೀಯ ಸೇನಾ-1 ಹಾಗೂ ಇತರರು ನಾಲ್ಕು ಸ್ಥಾನಗಳಲ್ಲಿ ಗೆದ್ದಿದ್ದಾರೆ.

 ಬೃಹನ್ಮುಂಬಯಿ ಮಹಾನಗರಪಾಲಿಕೆಯ ಎಲ್ಲಾ 227 ಸ್ಥಾನಗಳಿಗೆ ಫೆಬ್ರವರಿ 21ರಂದು ಚುನಾವಣೆ ನಡೆದಿದ್ದು, ಇಂದು ಬೆಳಗ್ಗೆ ಮತ ಏಣಿಕೆ ಆರಂಭಗೊಂಡಿತ್ತು.

227 ಸದಸ್ಯ ಬಲದ ಬಿಎಂಸಿ ಪಾಲಿಕೆಯಲ್ಲಿ ಬಹುಮತ ಪಡೆಯಲು 114 ಸ್ಥಾನಗಳ ಅವಶ್ಯಕತೆಯಿದೆ. 84 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಶಿವಸೇನೆಗೆ ಬಹುಮತಕ್ಕೆ ಇನ್ನೂ 31 ಸ್ಥಾನಗಳ ಅಗತ್ಯವಿದೆ.

  , ಬಿಎಂಸಿ ಚುನಾವಣೆಗಳಲ್ಲಿ ಬಿಜೆಪಿಯ ಈ ತನಕದ ಅತ್ಯುತ್ತಮ ಸಾಧನೆ ಇದಾಗಿದೆ. ಐದು ವರ್ಷಗಳ ಹಿಂದೆ ನಡೆದ ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ ಕೇವಲ 31 ಸ್ಥಾನಗಳನ್ನು ಗಳಿಸಿತ್ತು. ಆದರೆ ಕಳೆದ ಚುನಾವಣೆಯಲ್ಲಿ 52 ಸ್ಥಾನಗಳನ್ನು ಗಳಿಸಿ ದ್ವಿತೀಯ ಸ್ಥಾನದಲ್ಲಿದ್ದ ಕಾಂಗ್ರೆಸ್, ಈ ಸಲ 31 ಸ್ಥಾನಗಳಲ್ಲಿ ಮಾತ್ರ ಗೆಲುವುಕಂಡಿದೆ.

ಮಹಾರಾಷ್ಟ್ರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಪಾಲುದಾರ ಪಕ್ಷಗಳಾದ ಬಿಜೆಪಿ ಹಾಗೂ ಶಿವಸೇನೆಗೆ ಬಿಎಂಸಿ ಚುನಾವಣೆಯು ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿತ್ತು. ಕಳೆದ 20 ವರ್ಷಗಳ ಆನಂತರ ಇದೇ ಮೊದಲ ಬಾರಿಗೆ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಈ ಎರಡೂ ಪಕ್ಷಗಳು, ಚುನಾವಣಾ ಪ್ರಚಾರದ ವೇಳೆ ಪರಸ್ಪರ ಆರೋಪ, ಪ್ರತ್ಯಾರೋಪಕ್ಕಿಳಿದಿದ್ದವು.

  ಈ ಮಧ್ಯೆ ಮುಂಬೈ ಮಹಾನಗರಪಾಲಿಕೆ ಚುನಾವಣೆಯಲ್ಲಿ ತನ್ನ ಸಾಧನೆಯ ಬಗ್ಗೆ ಶಿವಸೇನೆ ತೃಪ್ತಿ ವ್ಯಕ್ತಪಡಿಸಿದೆ. ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ ಮತ್ತಿತರ ಪಕ್ಷಗಳ ಮತಗಳನ್ನು ಕಸಿದುಕೊಂಡಿದೆಯೇ ಹೊರತು ತನ್ನದಲ್ಲವೆಂದು ಶಿವಸೇನೆ ಹೇಳಿಕೊಂಡಿದೆ.

ಮಹಾರಾಷ್ಟ್ರ ಪೌರಾಡಳಿತ ಚುನಾವಣೆಯ ಬಳಿಕ ಶಿವಸೇನೆಯು, ಫಡ್ನವೀಸ್ ಸರಕಾರಕ್ಕೆ ಬೆಂಬಲವನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆಯೆಂದು ಪಕ್ಷದ ವರಿಷ್ಠ ಉದ್ಧವ್ ಠಾಕ್ರೆ ಹೇಳಿದ್ದರು. ಸದ್ಯದಲ್ಲೇ ಮಹಾರಾಷ್ಟ್ರವು ಮಧ್ಯಾಂತರ ಚುನಾವಣೆಯನ್ನು ಎದುರಿಸಲಿದೆಯೆಂದು ಅವರು ತಿಳಿಸಿದ್ದರು.

ಬಿಎಂಸಿ ಚುನಾವಣೆಗೆ ಶಿವಸೇನೆ ಹಾಗೂ ಬಿಜೆಪಿ ನಡುವೆ ಸೀಟುಹಂಚಿಕೆಯಲ್ಲಿ ಒಮ್ಮತ ಮೂಡದ ಕಾರಣ, ಉದ್ಧವ್ ಠಾಕ್ರೆ ಅವರು ಪ್ರತ್ಯೇಕವಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದರು.

ನಗರಾಡಳಿತ ಚುನಾವಣೆ: ಬಿಜೆಪಿ ವಿಜಯದ ನಗೆ

ಮಹಾರಾಷ್ಟ್ರದ ನಗರಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವನ್ನ ಕಂಡಿದೆ. ಪುಣೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯು ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು, ಎನ್‌ಸಿಪಿಯನ್ನು ದ್ವಿತೀಯ ಸ್ಥಾನಕ್ಕೆ ಹಿಂದಿಕ್ಕಿದೆ.

131 ಸದಸ್ಯ ಬಲದ ಥಾಣೆಯಲ್ಲಿ ಶಿವಸೇನೆಗೆ ಬಹುಮತದೆಡೆಗೆ ದಾಪುಗಾಲು ಹಾಕಿದ್ದು, ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲು ಸಜ್ಡಾಗಿದೆ.

ನಾಸಿಕ್, ಪಿಂಪ್ರಿಚಿಂಚ್‌ವಾಡ್, ಆಕೋಲಾ, ಅಮರಾವತಿ, ನಾಗಪುರ, ಸೋಲಾಪುರ ಹಾಗೂ ಉಲ್ಲಾಸ್ ನಗರಗಳಲ್ಲಿ ಬಿಜೆಪಿಯು ಇತರ ಪಕ್ಷಗಳಿಗಿಂತ ಮುನ್ನಡೆ ಸಾಧಿಸಿದೆ.

  ಆದರೆ ಭೀಡ್ ನಗರಪಾಲಿಕೆಯಲ್ಲಿ ಬಿಜೆಪಿ ಭಾರೀ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕಿ, ಮಹಾರಾಷ್ಟ್ರ ಸಚಿವೆ ಪಂಕಜಾ ಮುಂಢೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಸ್ತಾಪ ಮುಂದಿಟ್ಟಿದ್ದಾರೆ.

ಈ ಮಧ್ಯೆ ಬೃಹನ್ಮುಂಬಯಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ದಯನೀಯ ಸೋಲಿನ ಹೊಣೆಹೊತ್ತು ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್ ರಾಜೀನಾಮೆಯ ಕೊಡುಗೆ ನೀಡಿದ್ದಾರೆ.

 ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶವು ಬಿಜೆಪಿಯ ಪಾರದರ್ಶಕ ತೆ ಕುರಿತ ಕಾರ್ಯಸೂಚಿಗೆ ದೊರೆತ ಸ್ಪಷ್ಟ ಗೆಲುವೆಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News