ರಾಹುಲ್ ಪ್ರಬುದ್ಧರಲ್ಲ, ಎಂದ ಶೀಲಾ ದೀಕ್ಷಿತ್

Update: 2017-02-24 05:40 GMT

ಹೊಸದಿಲ್ಲಿ, ಫೆ.24: ‘‘ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇನ್ನೂ ಪ್ರಬುದ್ಧರಾಗಿಲ್ಲ. ಅವರ ವಯಸ್ಸು ಅವರನ್ನು ಪ್ರಬುದ್ಧರನ್ನಾಗಲು ಬಿಡುತ್ತಿಲ್ಲ. ಅವರಿಗೆ ಕಾಲಾವಕಾಶ ನೀಡಿ,’’ ಎಂದು ಹೇಳಿದವರು ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್.

ದಿ ಇಕನಾಮಿಕ್ ಟೈಮ್ಸ್ ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ರಾಹುಲ್ ಅವರನ್ನು ಹೊಗಳುತ್ತಾ ರೈತರ ಬವಣೆಯ ಬಗ್ಗೆ ರಾಹುಲ್ ಮಾತ್ರ ಮಾತನಾಡಿದ್ದಾರೆ ಎಂದರು. ‘‘ಅವರು ಬಹಳ ದೂರ ಸಾಗಿ ಬಂದಿದ್ದಾರೆ. ಪ್ರಧಾನಿಯಾಗುವ ಅವಕಾಶ ಅವರಿಗೆ ಮುಂದೆ ಬರಲಿದೆ. ಅವರು ಈಗ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ, ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರು ತಮ್ಮ ಮನಸ್ಸಿಗೆ ತೋಚಿದ್ದನ್ನು ಹೇಳುತ್ತಾರೆ. ಇದು ಒಳ್ಳೆಯ ಲಕ್ಷಣ ಎಂದು ನನಗನಿಸುತ್ತದೆ. ಅವರು ಸಹಜವಾಗಿ ಮಾತನಾಡುತ್ತಾರೆ ಆದರೆ ಕೆಲವರಿಗೆ ಅದು ಇಷ್ಟವಾಗುತ್ತಿಲ್ಲ,’’ ಎಂದರು ಶೀಲಾ ದೀಕ್ಷಿತ್.

ರಾಹುಲ್ ಅವರು ಕಾಂಗ್ರೆಸ್ ಅಧ್ಯಕ್ಷರಾಗಲು ಸಮಯ ಕೂಡಿ ಬಂದಿಲ್ಲವೇ ಎಂಬ ಪ್ರಶ್ನೆಗೆ ‘‘ಈ ಬೆಳವಣಿಗೆ ಈ ವರ್ಷ ಆಗಬೇಕು ಎಂದು ನನಗನಿಸುತ್ತದೆ. ಹಲವಾರು ದಶಕಗಳಿಂದ ಒಬ್ಬರೇ ಹೊಂದಿರುವ ಹುದ್ದೆಗಳ ನಾಯಕತ್ವದಲ್ಲಿ ಬದಲಾವಣೆ ತರುವ ಅಗತ್ಯವಿದೆ. ಈ ಚುನಾವಣೆಗಳು ನಡೆದ ನಂತರ ಇವೆಲ್ಲ ಆಗಬಹುದು,’’ ಎಂದರು ಶೀಲಾ ದೀಕ್ಷಿತ್.

ಪ್ರಿಯಾಂಕ ಬಗ್ಗೆ ಗಮನ ಸೆಳೆದಾಗ ‘‘ಆಕೆ ಬಹಳ ಸೂಕ್ಷ್ಮಮತಿ ಮತ್ತು ಬುದ್ಧಿವಂತೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್-ಎಸ್‌ಪಿ ನಡುವಿನ ಮೈತ್ರಿ ಸಾಧಿಸುವಲ್ಲಿ ಆಕೆ ಪ್ರಮುಖ ಪಾತ್ರವನ್ನು ಸದ್ದಿಲ್ಲದೇ ವಹಿಸಿದ್ದಾರೆ,’’ ಎಂದು ಹೇಳಿದರು.

‘‘ಪ್ರಿಯಾಂಕ ಅವರು ಚುನಾವಣಾ ರಾಜಕೀಯ ರಂಗ ಪ್ರವೇಶಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದು ಅವರ ಹಾಗೂ ಅವರ ಕುಟುಂಬಕ್ಕೆ ಬಿಟ್ಟ ನಿರ್ಧಾರ. ರಾಹುಲ್ ಮತ್ತು ಪ್ರಿಯಾಂಕ ಪಕ್ಷದಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಬೇಕೆಂಬುದು ನಮ್ಮ ಇಚ್ಛೆ,’’ ಎಂದು ಶೀಲಾ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News