ನೋಟ್ ನಿಷೇಧವು ವ್ಯಾಕ್ಯೂಮ್ ಕ್ಲೀನರ್‌ನಂತೆ ಹಣವನ್ನು ಎಳೆದುಕೊಂಡಿತು :ಐಎಂಎಫ್ ಅಧಿಕಾರಿ

Update: 2017-02-24 14:22 GMT

ವಾಶಿಂಗ್ಟನ್, ಫೆ. 24: ಭಾರತದ ನೋಟ್ ಅಮಾನ್ಯ ಕ್ರಮವು ಭಾರೀ ಪ್ರಮಾಣದ ನಗದು ಕೊರತೆಗೆ ಕಾರಣವಾಯಿತು ಹಾಗೂ ಅದು ಜನರ ದೈನಂದಿನ ಬಳಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಏಶ್ಯ ಮತ್ತು ಪೆಸಿಫಿಕ್ ವಿಭಾಗದ ಸಹಾಯಕ ನಿರ್ದೇಶಕ ಹಾಗೂ ಭಾರತೀಯ ಕಚೇರಿಯ ಮುಖ್ಯಸ್ಥ ಪೌಲ್ ಎ. ಕ್ಯಾಶಿನ್ ಹೇಳಿದ್ದಾರೆ.

‘‘ಅದು ವ್ಯಾಕ್ಯೂಮ್ ಕ್ಲೀನರ್‌ನಂತೆ ನಗದನ್ನು ಒಳಗೆಳೆದುಕೊಂಡಿತು’’ ಎಂದು ಅವರು ಅಭಿಪ್ರಾಯಪಟ್ಟರು.

‘‘ಅಸಾಂಪ್ರದಾಯಿಕ ಹಣಕಾಸು ನೀತಿಗಳಲ್ಲಿ ಹಣದ ‘ಹೆಲಿಕಾಪ್ಟರ್ ಡ್ರಾಪ್ಸ್’ ಎಂಬ ನೀತಿಯನ್ನು ನಾವು ಕೇಳಿರುತ್ತೇವೆ. ಅದೇ ರೀತಿ, ಈ ನೋಟ್ ಅಮಾನ್ಯ ಕ್ರಮವನ್ನು ವ್ಯಾಕ್ಯೂಮ್ ಕ್ಲೀನರ್ ಎಂಬುದಾಗಿ ಬಣ್ಣಿಸಬಹುದಾಗಿದೆ’’ ಎಂದು ಪಿಟಿಐಯೊಂದಿಗೆ ಮಾತನಾಡಿದ ಅವರು ಹೇಳಿದರು.

‘‘ಅದು ಆರ್ಥಿಕತೆಯಿಂದ ಹಣವನ್ನು ಎಳೆದುಕೊಳ್ಳುತ್ತಿತ್ತು. ಬಳಿಕ ಅದೇ ವ್ಯಾಕ್ಯೂಮ್ ಕ್ಲೀನರ್ ವಿರುದ್ಧ ದಿಕ್ಕಿನಲ್ಲಿ ಹೋಗಿ ನಿಧಾನವಾಗಿ ಹಣವನ್ನು ತುಂಬುತ್ತಿತ್ತು. ಆದರೆ, ಅದು ನಾನು ಹೇಳಿದಂತೆ ಅತ್ಯಂತ ನಿಧಾನ ಗತಿಯಲ್ಲಿ ಸಾಗುತ್ತಿತ್ತು. ಅದು ಭಾರೀ ನಗದು ಕೊರತೆಗೆ ಕಾರಣವಾಯಿತು ಹಾಗೂ ಅದು ಜನರ ದೈನಂದಿನ ಬಳಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು’’ ಎಂದರು.

ಭಾರತಕ್ಕೆ ಸಂಬಂಧಿಸಿದ ವಾರ್ಷಿಕ ವರದಿ ಬಿಡುಗಡೆ ಸಂದರ್ಭದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News