ಫಿಲಿಪ್ಪೀನ್ಸ್: ಅಧ್ಯಕ್ಷರ ಟೀಕಾಕಾರೆಯ ಬಂಧನ

Update: 2017-02-24 14:26 GMT

ಮನಿಲಾ (ಫಿಲಿಪ್ಪೀನ್ಸ್), ಫೆ. 24: ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್‌ರ ಮಾದಕ ದ್ರವ್ಯದ ವಿರುದ್ಧದ ಸಮರದ ಪ್ರಬಲ ಟೀಕಾಕಾರರಾಗಿರುವ ಸೆನೆಟರ್ ಲೈಲಾ ಡಿ ಲಿಮಾ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಅವರ ವಿರುದ್ಧ ದೇಶದ ಜೈಲುಗಳಲ್ಲಿರುವ ಮಾದಕ ದ್ರವ್ಯ ವ್ಯಾಪಾರಿಗಳಿಂದ ಹಣ ಪಡೆದ ಆರೋಪವನ್ನು ಹೊರಿಸಲಾಗಿದೆ.

ಲೈಲಾ, ಅವರ ಮಾಜಿ ಚಾಲಕ ಹಾಗೂ ಅಂಗರಕ್ಷಕ ಮತ್ತು ಜೈಲೊಂದರ ಮಾಜಿ ಅಧಿಕಾರಿಯೋರ್ವರನ್ನು ಬಂಧಿಸುವಂತೆ ಸ್ಥಳೀಯ ನ್ಯಾಯಾಲಯವೊಂದು ಆದೇಶ ನೀಡಿದೆ. ಕಾನೂನು ಇಲಾಖೆಯು ಕಳೆದ ವಾರ ದಾಖಲಿಸಿದ ಕ್ರಿಮಿನಲ್ ಮೊಕದ್ದಮೆಯಲ್ಲಿ ಸತ್ಯಾಂಶವಿರುವುದರಿಂದ ನ್ಯಾಯಾಧೀಶರು ಈ ಆದೇಶ ಹೊರಡಿಸಿದ್ದಾರೆನ್ನಲಾಗಿದೆ.

‘‘ಸತ್ಯ ಹೊರಬರುತ್ತದೆ ಹಾಗೂ ನನಗೆ ನ್ಯಾಯ ಸಿಗುತ್ತದೆ. ನಾನು ನಿರ್ದೋಷಿ’’ ಎಂದು ಪೊಲೀಸರು ಲೈಲಾರನ್ನು ಅವರ ಕಚೇರಿಯಿಂದ ಕರೆದುಕೊಂಡು ಹೋಗುವ ಸ್ವಲ್ಪವೇ ಹೊತ್ತಿನ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

ಆತ್ಮಸಾಕ್ಷಿಯ ಕೈದಿ: ಆ್ಯಮ್ನೆಸ್ಟಿ

ತಾನು ಲೈಲಾರನ್ನು ಆತ್ಮಸಾಕ್ಷಿಯ ಕೈದಿ ಎಂಬುದಾಗಿ ಪರಿಗಣಿಸುವುದಾಗಿ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಗುರುವಾರ ಹೇಳಿದೆ.

‘‘ಲೈಲಾ ಡಿ ಲಿಮಾ ಬಂಧನವು ಅಧ್ಯಕ್ಷ ಡುಟರ್ಟ್‌ರ ಟೀಕಾಕಾರರ ಬಾಯಿ ಮುಚ್ಚಿಸುವ ಹಾಗೂ ‘ಮಾದಕ ದ್ರವ್ಯದ ವಿರುದ್ಧದ ಹೋರಾಟ’ದಲ್ಲಿ ನಡೆಯುತ್ತಿರುವ ಗಂಭೀರ ಮಾನವಹಕ್ಕು ಉಲ್ಲಂಘನೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಫಿಲಿಪ್ಪೀನ್ಸ್ ಸರಕಾರ ನಡೆಸಿರುವ ಪ್ರಯತ್ನವಾಗಿದೆ’’ ಎಂದು ಅದು ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News