ಭಾರತೀಯ ಟೆಕ್ಕಿಗಳನ್ನು ಉಪೇಕ್ಷಿಸಿ ಚೀನಾ ತಪ್ಪು ಮಾಡಿದೆ :ಸರಕಾರಿ ಪತ್ರಿಕೆ ಗ್ಲೋಬಲ್ ಟೈಮ್ಸ್’

Update: 2017-02-24 14:37 GMT

ಬೀಜಿಂಗ್ (ಚೀನಾ), ಫೆ. 24: ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಣತರನ್ನು ‘ನಿರ್ಲಕ್ಷಿಸುವ’ ಮೂಲಕ ಚೀನಾ ತಪ್ಪು ಮಾಡಿದೆ ಎಂದು ಆ ದೇಶದ ಸರಕಾರಿ ಒಡೆತನದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಶುಕ್ರವಾರ ಹೇಳಿದೆ.

ವೇಗವಾಗಿ ಹೊಸತನವನ್ನು ಸಂಶೋಧಿಸುವ ತನ್ನ ಸಾಮರ್ಥ್ಯವನ್ನು ಉಳಿಸಿಕೊಳ್ಳಲು ಚೀನಾ ಪರಿಣತ ಭಾರತೀಯ ಪ್ರತಿಭೆಗಳನ್ನು ಆಕರ್ಷಿಸಬೇಕು ಎಂದು ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನವೊಂದು ಅಭಿಪ್ರಾಯಪಟ್ಟಿದೆ.

ಜನಪ್ರಿಯ ಎಚ್-1ಬಿ ವೀಸಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಮುಂದಾಗಿರುವ ಹಿನ್ನೆಲೆಯಲ್ಲಿ ಚೀನಾ ಪತ್ರಿಕೆಯ ಈ ಲೇಖನ ಮಹತ್ವ ಪಡೆದುಕೊಂಡಿದೆ. ಭಾರತದ ಶ್ರೇಷ್ಠ ಮಾಹಿತಿ ತಂತ್ರಜ್ಞಾನ (ಐಟಿ) ಪ್ರತಿಭೆಗಳನ್ನು ಅಮೆರಿಕಕ್ಕೆ ಕಳುಹಿಸಲು ಭಾರತೀಯ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಈ ವೀಸಾಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿವೆ.

ಭಾರತವನ್ನು ಟೀಕಿಸುವ ಲೇಖನಗಳನ್ನೇ ಪ್ರತಿದಿನವೆಂಬಂತೆ ಪ್ರಕಟಿಸುವ ‘ಗ್ಲೋಬಲ್ ಟೈಮ್ಸ್’, ಈ ಬಾರಿ ಮಾತ್ರ ‘‘ಭಾರತೀಯ ಪ್ರತಿಭೆಗಳನ್ನು ಉಪೇಕ್ಷಿಸುವ ಮೂಲಕ ಚೀನಾ ತಪ್ಪು ಮಾಡಿದೆ’’ ಎಂಬುದನ್ನು ಒಪ್ಪಿಕೊಂಡಿದೆ.

ಅಮೆರಿಕ ಮತ್ತು ಯುರೋಪ್‌ಗಳಿಂದ ಬರುವ ಪ್ರತಿಭೆಗಳಿಗೆ ಚೀನಾ ಹೆಚ್ಚಿನ ಮಹತ್ವ ನೀಡುತ್ತಿದೆ ಎಂದಿದೆ.

ಇದು ಭಾರತವನ್ನು ಶ್ಲಾಘಿಸಿ ಪತ್ರಿಕೆ ಪ್ರಕಟಿಸಿದ ಎರಡನೆ ಲೇಖನವಾಗಿದೆ. ಈ ಹಿಂದೆ, ಒಂದೇ ರಾಕೆಟ್‌ನಲ್ಲಿ 104 ಉಪಗ್ರಹಗಳನ್ನು ಭೂಮಿಯ ಕಕ್ಷೆಯಲ್ಲಿ ಇರಿಸಿರುವ ಭಾರತೀಯ ಬಾಹ್ಯಾಕಾಶ ತಂಡದ ಸಾಧನೆಯನ್ನು ಪತ್ರಿಕೆ ಶ್ಲಾಘಿಸಿತ್ತು. ಇಸ್ರೋದ ಈ ಸಾಧನೆಯು ಚೀನಾ ಬಾಹ್ಯಾಕಾಶ ಸಂಸ್ಥೆಗೆ ‘ಎಚ್ಚರಿಕೆಯ ಕರೆಗಂಟೆ’ ಎಂಬುದಾಗಿ ಬಣ್ಣಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News