ನಾಮ್ ಹತ್ಯೆಗೆ ಅತ್ಯಂತ ಮಾರಕ ವಿಷ :ಮಲೇಶ್ಯ ಪೊಲೀಸ್

Update: 2017-02-24 14:46 GMT

ಕೌಲಾಲಂಪುರ, ಫೆ. 24: ‘ವಿಎಕ್ಸ್ ನರ್ವ್ ಏಜಂಟ್’ ಎಂಬ ಅತ್ಯಂತ ವಿಷಕಾರಿ ರಾಸಾಯನಿಕವನ್ನು ಬಳಸಿ ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಸಹೋದರ ಕಿಮ್ ಜಾಂಗ್ ನಾಮ್ ಅವರನ್ನು ಮಲೇಶ್ಯದ ರಾಜಧಾನಿ ಕೌಲಾಲಂಪುರದ ವಿಮಾನ ನಿಲ್ದಾಣದಲ್ಲಿ ಹತ್ಯೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖಾ ವರದಿ ತಿಳಿಸಿದೆ ಎಂದು ಮಲೇಶ್ಯ ಪೊಲೀಸರು ಶುಕ್ರವಾರ ಹೇಳಿದ್ದಾರೆ.

ಮಲೇಶ್ಯದ ರಾಸಾಯನಿಕ ಇಲಾಖೆಯು ಉತ್ತರ ಕೊರಿಯ ರಾಷ್ಟ್ರೀಯನೊಬ್ಬನ ಕಣ್ಣು ಮತ್ತು ಮುಖದಿಂದ ಪಡೆದುಕೊಂಡಿರುವ ಮಾದರಿಗಳ ವಿಶ್ಲೇಷಣೆಯಲ್ಲಿ ಇದು ಸಾಬೀತಾಗಿದೆ ಎಂದು ಪೊಲೀಸರು ಹೇಳಿದರು.

ವಿಎಕ್ಸ್ ನರ್ವ್ ಏಜಂಟ್ ಅಥವಾ ಎಸ್-2 ಡೈಐಸೊಪ್ರೊಫೈಲಮಿನೊಇಥೈಲ್ ಮಿಥೈಲ್‌ಫಾಸ್ಫೋನೊಥಯೋಲೇಟ್ ರಾಸಾಯನಿಕ ಅಸ್ತ್ರವಾಗಿದ್ದು, ಇದನ್ನು ವಿಶ್ವಸಂಸ್ಥೆಯು ಸಮೂಹ ವಿನಾಶಕ ಅಸ್ತ್ರ ಎಂಬುದಾಗಿ ವರ್ಗೀಕರಿಸಿದೆ.

ಉತ್ತರ ಕೊರಿಯ ಸರ್ವಾಧಿಕಾರಿಯ ದಿವಂಗತ ತಂದೆಯ ಇನ್ನೊಂದು ಪತ್ನಿಯ ಮಗನಾಗಿರುವ ಕಿಂಗ್ ಜಾಂಗ್ ನಾಮ್ ತಾನು ವಾಸಿಸುವ ಮಕಾವು ದೇಶಕ್ಕೆ ಹೋಗಲು ವಿಮಾನ ಏರಲು ಫೆಬ್ರವರಿ 13ರಂದು ವಿಮಾನ ನಿಲ್ದಾಣಕ್ಕೆ ಬಂದಿದ್ದಾಗ ಅವರನ್ನು ಇಬ್ಬರು ಮಹಿಳೆಯರು ವಿಷಪ್ರಾಶನ ಮಾಡಿ ಕೊಂದಿದ್ದರು.

ಕಿಮ್ ಜಾಂಗ್ ಉನ್‌ರ ಪರಿತ್ಯಕ್ತ ಅಣ್ಣನನ್ನು ಕೊಲ್ಲಲು ಉತ್ತರ ಕೊರಿಯದ ಏಜಂಟ್‌ಗಳು ನಡೆಸಿದ ಕಾರ್ಯಾಚರಣೆ ಅದಾಗಿತ್ತು ಎಂದು ದಕ್ಷಿಣ ಕೊರಿಯ ಮತ್ತು ಅಮೆರಿಕದ ಅಧಿಕಾರಿಗಳು ಭಾವಿಸಿದ್ದಾರೆ.

ಸಮೂಹ ನಾಶಕ ಅಸ್ತ್ರ

ಕಿಮ್ ಜಾಂಗ್ ನಾಮ್ ಹತ್ಯೆಯಲ್ಲಿ ಬಳಸಲಾದ ರಾಸಾಯನಿಕ ವಿಎಕ್ಸ್ ಮಾನವ ನಿರ್ಮಿಸಿದ ಅತ್ಯಂತ ಮಾರಕ ರಾಸಾಯನಿಕ ಅಸ್ತ್ರಗಳ ಪೈಕಿ ಒಂದು. ನರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಈ ರಾಸಾಯನಿಕದ ಕೇವಲ 10 ಮಿಲಿ ಗ್ರಾಂ ಅಥವಾ ಒಂದು ಬಿಂದು ಮನುಷ್ಯರನ್ನು ಕೇವಲ ನಿಮಿಷಗಳಲ್ಲಿ ಕೊಲ್ಲಲು ಸಾಕು ಎಂದು ಪರಿಣತರು ಹೇಳುತ್ತಾರೆ.

ಈ ರಾಸಾಯನಿಕವನ್ನು 1950ರ ದಶಕದಲ್ಲಿ ಮೊದಲ ಬಾರಿಗೆ ಬ್ರಿಟನ್‌ನಲ್ಲಿ ಉತ್ಪಾದಿಸಲಾಯಿತು. ಅದನ್ನು ಸೇವಿಸಿದರೆ ಮನುಷ್ಯರು ನಿಮಿಷಗಳಲ್ಲೇ ಪ್ರಜ್ಞೆ ಕಳೆದುಕೊಳ್ಳುತ್ತಾರೆ, ಪಕ್ಷವಾತಕ್ಕೆ ಗುರಿಯಾಗುತ್ತಾರೆ ಹಾಗೂ ಉಸಿರಾಟದ ತೊಂದರೆಗೆ ಸಿಲುಕುತ್ತಾರೆ.

ತಮ್ಮ ಮೇಲೆ ವಿಎಕ್ಸ್ ಪ್ರಯೋಗವಾಗಿದೆ ಎನ್ನುವುದು ಜನರಿಗೆ ಗೊತ್ತೇ ಆಗುವುದಿಲ್ಲ. ಯಾಕೆಂದರೆ ವಿಎಕ್ಸ್‌ಗೆ ರುಚಿಯಿಲ್ಲ ಮತ್ತು ವಾಸನೆಯಿಲ್ಲ. ಅದನ್ನು ಸಣ್ಣ ಪ್ರಮಾಣದಲ್ಲಿ ವಿಮಾನ ನಿಲ್ದಾಣದ ಒಳಗೆ ತಂದರೆ ಭದ್ರತಾ ಸಿಬ್ಬಂದಿ ಮತ್ತು ಸೆನ್ಸಾರ್‌ಗಳ ತಪಾಸಣೆಗೂ ಅದು ಸಿಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News