ಅನೈತಿಕ ಪೊಲೀಸ್‌ಗಿರಿಗೆ ನೊಂದು ಸಾವಿಗೆ ಶರಣಾದ ಯುವಕ

Update: 2017-02-24 15:34 GMT

ತಿರುವನಂತಪುರ,ಫೆ.24: ಕೇರಳದ ಕೊಲ್ಲಂ ಬೀಚ್‌ನಲ್ಲಿ ಅನೈತಿಕ ಪೊಲೀಸರ ಗೂಂಡಾಗಿರಿಯಿಂದ ನೊಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಧಾರುಣ ಘಟನೆ ಗುರುವಾರ ವರದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಮೇಲೆ ನಡೆದ ನಿರಂತರ ತೇಜೋವಧೆ ಹಾಗೂ ಕಿರುಕುಳದಿಂದ ಬೇಸತ್ತು ಪಾಲ್ಘಾಟ್ ನಿವಾಸಿ ಅನೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  ‘ಪ್ರೇಮಿಗಳ ದಿನ’ವಾದ ಫೆಬ್ರವರಿ 14ರಂದು ಅನೀಶ್ ಹಾಗೂ ಅವರ ಸ್ನೇಹಿತೆ ಕೊಲ್ಲಂ ಬೀಚ್‌ನಲ್ಲಿ ತೆರಳಿದ್ದರು. ಆಸುಪಾಸಿನಲ್ಲಿ ಯಾವುದೇ ಶೌಚಗೃಹಗಳಿಲ್ಲದೆ ಇದ್ದುದರಿಂದ ಬಹಿರ್ದೆಶೆಗಾಗಿ ನಿರ್ಜನ ಸ್ಥಳಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಐವರು ಪಾನಮತ್ತರ ಗುಂಪೊಂದು ಅಲ್ಲಿಗೆ ಬಂದು, ಆಕೆಯ ಮೇಲೆ ಲೈಂಗಿಕ ಕಿರುಕುಳ ಎಸಗಲು ಯತ್ನಿಸಿತ್ತು. ಭಯಭೀತ ಯುವತಿಯು ಜೋರಾಗಿ ಕಿರುಚಿದಾಗ ಅನೀಶ್ ಸ್ಥಳಕ್ಕೆ ಧಾವಿಸಿ ಬಂದಾಗ, ಕಿಡಿಗೇಡಿಗಳ ಗುಂಪು ಅವರ ಮೇಲೂ ಹಲ್ಲೆ ನಡೆಸಿತ್ತು ಮತ್ತು ಯುವಜೋಡಿಯು ಅನೈತಿಕ ಚಟುವಟಿಕೆ ನಡೆಸುತ್ತಿದೆಯೆಂದು ಆಪಾದಿಸಿತ್ತು. ಅನೀಶ್ ಮೇಲೆ ಹಲ್ಲೆ ನಡೆಸುವ ದೃಶ್ಯಗಳ ವಿಡಿಯೋವನ್ನು ದುಷ್ಕರ್ಮಿಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಸಾರ ಮಾಡಿತ್ತು.

 ಸಾಮಾಜಿಕ ಜಾಲತಾಣಗಳಲ್ಲಿ ತನ್ನನ್ನು ದುಷ್ಕರ್ಮಿಗಳು ಅಪಮಾನಿಸಿದ್ದರಿಂದ ಸಾವಿಗೆ ಶರಣಾಗುವುದಾಗಿ ಅನೀಶ್ ಹಾಗೂ ಅವರ ಸ್ನೇಹಿತೆ ಪತ್ರಕರ್ತರ ಮುಂದೆ ನೋವಿನಿಂದ ಹೇಳಿಕೊಂಡಿದ್ದರು.

 ಹತ್ತು ದಿನಗಳ ಬಳಿಕ ಅನೀಶ್‌ನ ಮೃತದೇಹವು ಪಾಲಕ್ಕಾಡ್‌ನಲ್ಲಿರುವ ಅವರ ಮನೆ ಸಮೀಪದ ಮರವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅನೀಶ್ ಅವರ ತಾಯಿ ಹಾಗೂ ಸಹೋದರಿ ಕೆಲಸದ ಸ್ಥಳಕ್ಕೆ ತೆರಳಿದ ಬೆನ್ನಲ್ಲೇ ಅವರು ಸಾವಿಗೆ ಶರಣಾಗಿದ್ದರು.

ಅನೀಶ್ ಬರೆದಿಟ್ಟಿದ್ದ ಆತ್ಮಹತ್ಯೆ ಪತ್ರದಲ್ಲಿ ಇಬ್ಬರು ಆರೋಪಿಗಳ ಹೆಸರನ್ನು ಬರೆದಿಟ್ಟಿದ್ದಾರೆ. ಯಾವುದೇ ಕಾರಣವಿಲ್ಲದೆ ತನಗೆ ಆರೋಪಿಗಳ ಗೆಳೆಯರು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಕಿರುಕುಳ ನೀಡಿರುವುದನ್ನೂ ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News