ಬಿಜೆಪಿ ಹಣಿಯಲು ಕಾಂಗ್ರೆಸ್ ಜತೆ ಶಿವಸೇನೆ ದೋಸ್ತಿ?

Update: 2017-02-25 03:19 GMT

ಮುಂಬೈ ಫೆ.25: ದೇಶದ ಅತ್ಯಂತ ಶ್ರೀಮಂತ ಸ್ಥಳೀಯ ಸಂಸ್ಥೆಯಾದ ಮುಂಬೈ ಮಹಾನಗರ ಪಾಲಿಕೆಯ ಅಧಿಕಾರದ ಗದ್ದುಗೆ ಹಿಡಿಯಲು ಶಿವಸೇನೆ ಕಸರತ್ತು ಆರಂಭಿಸಿದ್ದು, ಬಿಜೆಪಿಗೆ ಚೆಕ್‌ಮೇಟ್ ನೀಡುವ ಸಲುವಾಗಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ಪ್ರಯತ್ನ ಆರಂಭಿಸಿದೆ.

ಉದ್ಧವ್ ಠಾಕ್ರೆಯವರ ರಾಯಭಾರಿಗಳು ಈಗಾಗಲೇ ಕಾಂಗ್ರೆಸ್ ಮುಖಂಡರನ್ನು ಸಂಪರ್ಕಿಸಿ, ಹೊಸ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ನಗರದ ಮೇಯರ್ ಸ್ಥಾನಕ್ಕೆ ಶಿವಸೇನೆ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವೊಲಿಸಲಾಗುತ್ತಿದೆ ಎನ್ನುವುದನ್ನು ಅಧಿಕೃತ ಮೂಲಗಳು ಖಚಿತಪಡಿಸಿವೆ.

ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿರುವ ಕಾಂಗ್ರೆಸ್ ಪಕ್ಷ, ಶಿವಸೇನೆಗೆ ಬಾಹ್ಯ ಬೆಂಬಲ ನೀಡುವ ಭರವಸೆ ನೀಡಿದೆ ಎನ್ನುವುದನ್ನು ಮೂಲಗಳು ಬಹಿರಂಗಪಡಿಸಿವೆ. ಇದಕ್ಕೆ ಪ್ರತಿಯಾಗಿ ಉಪಮೇಯರ್ ಹುದ್ದೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಲು ಶಿವಸೇನೆ ಮುಂದಾಗಿದೆ.

227 ಸದಸ್ಯ ಬಲದ ಪಾಲಿಕೆಯಲ್ಲಿ ಶಿವಸೇನೆ 84, ಬಿಜೆಪಿ 81 ಹಾಗೂ ಕಾಂಗ್ರೆಸ್ 31 ಸ್ಥಾನಗಳನ್ನು ಹೊಂದಿವೆ. ಎಂಎನ್‌ಎಸ್ 14, ಎನ್‌ಸಿಪಿ 7 ಹಾಗೂ ಇತರ 9 ಸದಸ್ಯರಿದ್ದಾರೆ. ಶಿವಸೇನೆ ಹಾಗೂ ಕಾಂಗ್ರೆಸ್ ಕೈಜೋಡಿಸಿದರೆ, ಸರಳ ಬಹುಮತ ಸಿಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News