ಪ್ರವಾಸೋದ್ಯಮ ಪ್ರಚಾರಕ್ಕೆ ಕೊಹ್ಲಿಗೆ ಪ್ರವಾಹ ಪರಿಹಾರ ನಿಧಿಯಿಂದ ಹಣ?

Update: 2017-02-25 04:51 GMT

ಡೆಹ್ರಾಡೂನ್, ಫೆ.25: ಸದಾ ವಿವಾದದ ಮೂಲಕವೇ ಸುದ್ದಿ ಮಾಡಿದ ಹರೀಶ್ ರಾವತ್ ಸರಕಾರ ಇದೀಗ ಮತ್ತೊಂದು ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದೆ. ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವ ಮುನ್ನವೇ ಉತ್ತರಾಖಂಡ ಸರ್ಕಾರಕ್ಕೆ ಆಘಾತ ಎದುರಾಗಿದೆ.

ಉತ್ತರಾಖಂಡ ಸರ್ಕಾರ 2015ರ ಜೂನ್‌ನಲ್ಲಿ ಪ್ರವಾಹ ಪರಿಹಾರ ನಿಧಿಯಿಂದ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರುಗೆ 47.19 ಲಕ್ಷ ರೂ. ಪಾವತಿಸಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಹಾಗೂ ಬಿಜೆಪಿ ಮುಖಂಡ ಆಪಾದಿಸಿದ್ದಾರೆ. 2013ರ ಕೇದಾರನಾಥ ಪ್ರವಾಹ ಸಂತ್ರಸ್ತರಿಗಾಗಿ ಮಂಜೂರು ಮಾಡಿದ್ದ ನಿಧಿಯಿಂದ ಈ ನೆರವು ನೀಡಲಾಗಿದೆ ಎಂದು ಅವರು ಆಪಾದಿಸಿದ್ದಾರೆ.

ರಾಜ್ಯದ ಪ್ರವಾಸೋದ್ಯಮ ಪ್ರಚಾರ ರಾಯಭಾರಿಯಾಗಿದ್ದ ಕೊಹ್ಲಿಯವರಿಗೆ ಪ್ರವಾಸೋದ್ಯಮ ಕುರಿತ 60 ಸೆಕೆಂಡ್ ವೀಡಿಯೋಗಾಗಿ ಈ ಮೊತ್ತ ಪಾವತಿಸಲಾಗಿದೆ ಎಂದು ಅಜೇಂದ್ರ ಅಜಯ್ ದೂರಿದ್ದಾರೆ.
ಆದರೆ ಕೊಹ್ಲಿಯವರ ಏಜೆಂಟ್ ಹಾಗೂ ಕಾರ್ನರ್‌ಸ್ಟೋನ್ ಸ್ಪೋರ್ಟ್ ಅಂಡ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಮುಖ್ಯಸ್ಥ ಬಂಟಿ ಸಜ್‌ದೇಹ್ ಇಂಥ ಯಾವುದೇ ಹಣಕಾಸು ವಹಿವಾಟು ನಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ.

ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಅವರ ಮಾಧ್ಯಮ ಸಲಹೆಗಾರ ಸುರೇಂದ್ರ ಕುಮಾರ್ ಅವರು, "ಪ್ರವಾಸೋದ್ಯಮ ಉತ್ತರಾಖಂಡದ ಜೀವಾಳ. ಇದರ ಪ್ರಚಾರಕ್ಕೆ ಗಣ್ಯರೊಬ್ಬರನ್ನು ಆಯ್ಕೆ ಮಾಡಿಕೊಂಡರೆ ಏನು ತಪ್ಪು? ಈ ಬಗೆಗಿನ ಎಲ್ಲ ವ್ಯವಹಾರವೂ ಕಾನೂನುಬದ್ಧವಾಗಿಯೇ ನಡೆದಿದೆ. ಸೋಲಿನ ಭಯದಿಂದ ಬಿಜೆಪಿ ಇಂಥ ಅಪಪ್ರಚಾರಕ್ಕೆ ಹೊರಟಿದೆ" ಎಂದು ಹೇಳಿದ್ದಾರೆ.

ಆದರೆ ಅರ್ಜಿದಾರ ಅಜೇಂದ್ರ ಅಜಯ್, ಆರ್‌ಟಿಐ ಅನ್ವಯ ಸಲ್ಲಿಸಿದ ಅರ್ಜಿಗೆ ಸರ್ಕಾರ ನೀಡಿದ ಉತ್ತರದಲ್ಲಿ, ಕೊಹ್ಲಿಗೆ ಹಣ ಪಾವತಿಯಾಗಿರುವುದನ್ನು ದೃಢಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News