ನಾಳೆ ರಾಜ್ಯ ಕಾಂಗ್ರೆಸ್‌ ಸಮನ್ವಯ ಸಮಿತಿ ಸಭೆ

Update: 2017-02-25 07:29 GMT

ಬೆಂಗಳೂರು, ಫೆ.25: ರಾಜ್ಯ ಕಾಂಗ್ರೆಸ್‌ ಸಮನ್ವಯ ಸಮಿತಿ ಸಭೆ ರವಿವಾರ ನಡೆಯಲಿದ್ದು, ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ದಿಗ್ವಿಜಯ್‌ ಸಿಂಗ್‌ ನೇತೃತ್ವದಲ್ಲಿ  ನಡೆಯುವ ಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ಮರಳಿ ತರುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌, ಆಸ್ಕರ್‌ ಫೆರ್ನಾಂಡಿಸ್‌, ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ ಇವರನ್ನೊಳಗೊಂಡ ಕಾಂಗ್ರೆಸ್‌ನ ಸಮನ್ವಯ ಸಮಿತಿ ಸಭೆಯಲ್ಲಿ ಒಟ್ಟು 11 ವಿಚಾರಗಳು   ಚರ್ಚೆಗೆ ಬರಲಿದೆ.

ಸರಕಾರದ ಐದು ವರ್ಷಗಳ ಅವಧಿ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬಾಕಿ ಇರುವ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ  ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಮತದಾರರನ್ನು ಕಾಂಗ್ರೆಸ್‌ನತ್ತ ಸೆಳೆಯುವ ನಿಟ್ಟಿನಲ್ಲಿ ಚಿಂತನೆ ಸಭೆಯಲ್ಲಿ ನಡೆಯಲಿದೆ.
   ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವವದ ಸರಕಾರದಲ್ಲಿ ನಾಲ್ಕು ವರ್ಷ ಸಚಿವರಾಗಿ ಅಧಿಕಾರ ಪೂರೈಸಿರುವ  ಸಚಿವರುಗಳನ್ನು ಇದೇ ಸಂದರ್ಭದಲ್ಲಿ ಸಚಿವ ಸಂಪುಟದಿಂದ ಕೈ ಬಿಟ್ಟು, ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಗೆ  ಪಕ್ಷದ ಸಂಘಟನೆಯ ಜವಾಬ್ದಾರಿಯನ್ನು ನೀಡುವ ಪ್ರಸ್ತಾಪ ಇದೆ ಎಂದು ತಿಳಿದು ಬಂದಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ ಅವರಿಗೆ ಪಕ್ಷದ ಸಂಘಟನೆ ಜವಾಬ್ದಾರಿಯನ್ನು ನೀಡಿದಂತೆ ಸರಕಾರದಲ್ಲಿರುವ ಕೆಲವು  ಹಿರಿಯ ಸಚಿವರನ್ನು ಸಚಿವ ಸ್ಥಾನದ  ವಿಮುಕ್ತಿಗೊಳಿಸಿ ಅವರಿಗೆ  ಪಕ್ಷದ ಸಂಘಟನೆಯ ಜವಾಬ್ದಾರಿ ನೀಡಬೇಕೆನ್ನುವ ಅಭಿಪ್ರಾಯ ಕೇಳಿ  ಬಂದಿದೆ. 
ಪ್ರತಿ ಹಿರಿಯ ಸಚಿವರಿಗೆ 15 ವಿಧಾನ ಸಭಾ ಕ್ಷೇತ್ರಗಳ ಸಂಪೂರ್ಣ ಸಂಘಟನೆ ಜವಾಬ್ದಾರಿಯನ್ನು ವಹಿಸಬೇಕೆನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News