‘‘ಸಾರ್ವಜನಿಕ ಸ್ಥಳಗಳಲ್ಲಿ ಮಾತೃಭಾಷೆಯಲ್ಲಿ ಮಾತನಾಡಬೇಡಿ’’: ಅಮೆರಿಕದಲ್ಲಿರುವ ಭಾರತೀಯರ ಸಲಹೆ

Update: 2017-02-25 15:33 GMT

ಹೊಸದಿಲ್ಲಿ,ಫೆ. 25: ‘‘ಅಮೆರಿಕದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವಾಗ ಹಿಂದಿ ಅಥವಾ ಇತರ ಯಾವುದೇ ಭಾರತೀಯ ಭಾಷೆಯಲ್ಲಿ ಮಾತನಾಡಬೇಡಿ. ಅದು ನಿಮ್ಮನ್ನು ತೀವ್ರ ತೊಂದರೆಗೆ ಸಿಲುಕಿಸಬಹುದು ’’ ಇದು ಸಾಮಾಜಿಕ ಮಾಧ್ಯಮ ಗುಂಪುಗಳಲ್ಲಿ ಭಾರತೀಯರ ನಡುವೆ ಹರಿದಾಡುತ್ತಿರುವ ಸಲಹೆಗಳಲ್ಲೊಂದಾಗಿದೆ.

  ಇದು ಹೈದರಾಬಾದ್ ಮೂಲದ ಟೆಕ್ಕಿ ಶ್ರೀನಿವಾಸ್ ಕುಚಿಬೋಟ್ಲಾ ಅವರು ಜನಾಂಗೀಯ ದ್ವೇಷಕ್ಕೆ ಬಲಿಯಾದ ನಂತರ ಭಾರತೀಯರಲ್ಲಿ, ವಿಶೇಷವಾಗಿ ಅಮೆರಿಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ತೆಲುಗರಲ್ಲಿ ಮನೆಮಾಡಿರುವ ಭೀತಿಗೆ ನಿದರ್ಶನವಾಗಿದೆ. ಬುಧವಾರ ಕಾನ್ಸಾಸ್ ಸಿಟಿಯ ಬಾರೊಂದರಲ್ಲಿ ನಡೆದ ಗುಂಡು ಹಾರಾಟದಲ್ಲಿ ಕುಚಿಬೋಟ್ಲಾರ ಹತ್ಯೆಯಾಗಿದ್ದು, ಜೊತೆಯಲ್ಲಿದ್ದ ಸ್ನೇಹಿತ ಅಲೋಕ ರೆಡ್ಡಿ ಮದಸಾನಿ ಅವರು ಗಾಯಗೊಂಡಿದ್ದರು.

ಜೀವ ಎಲ್ಲಕ್ಕಿಂತಲೂ ಅಮೂಲ್ಯ ಎಂದಿರುವ ತೆಲಂಗಾಣ ಅಮೆರಿಕನ್ ತೆಲುಗು ಅಸೀಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ವಿಕ್ರಮ್ ಜಂಗಮ ಅವರು ಸಮುದಾಯದ ಸದಸ್ಯರು ಮತ್ತು ದಕ್ಷಿಣ ಏಷ್ಯ ಮೂಲದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

 ಸಾರ್ವಜನಿಕ ಸ್ಥಳಗಳಲ್ಲಿ ಇತರರೊಂದಿಗೆ ವಾದಕ್ಕಿಳಿಯಬೇಡಿ. ಯಾರಾದರೂ ನಿಮ್ಮನ್ನು ಪ್ರಚೋದಿಸುತ್ತಿದ್ದರೆ ಅವರೊಂದಿಗೆ ಸಂಘರ್ಷಕ್ಕಿಳಿಯದೆ ತಕ್ಷಣ ಆ ಸ್ಥಳವನ್ನು ಬಿಟ್ಟು ತೆರಳಿ. ನಾವು ಮಾತೃಭಾಷೆಯಲ್ಲಿ ಮಾತನಾಡಿದರೆ ಅದು ತಪ್ಪುಗ್ರಹಿಕೆಗೆ ಕಾರಣವಾಗ ಬಹುದು, ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಇಂಗ್ಲೀಷ್‌ನಲ್ಲಿಯೇ ಮಾತನಾಡಿ. ನಿರ್ಜನ ಪ್ರದೇಶಗಳಿಗೆ ತೆರಳುವುದನ್ನು ಅಥವಾ ಅಲ್ಲಿ ಒಂಟಿಯಾಗಿರುವುದನ್ನು ನಿವಾರಿಸಿಕೊಳ್ಳಿ. ತುರ್ತು ಸಂದರ್ಭಗಳಲ್ಲಿ 911ಕ್ಕೆ ಕರೆ ಮಾಡಲು ಹಿಂಜರಿಯಬೇಡಿ, ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಧಾವಿಸಿ ನಿಮಗೆ ನೆರವಾಗಬಹುದು. ನಿಮ್ಮ ಸುತ್ತುಮುತ್ತಲು ಏನು ನಡೆಯುತ್ತಿದೆ ಎನ್ನುವುದರ ಮೇಲೆ ಗಮನವಿಡಿ ಮತ್ತು ಶಂಕಾಸ್ಪದವಾದದ್ದು ಏನಾದರೂ ಕಂಡರೆ ಎಚ್ಚರಿಕೆಯಿಂದಿರಿ ಎಂದು ಜಂಗಮ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News