ಶ್ವೇತಭವನದ ಪತ್ರಿಕಾಗೋಷ್ಠಿಗೆ ಹಲವು ಸುದ್ದಿ ಮಾಧ್ಯಮಗಳಿಗೆ ನಿಷೇಧ

Update: 2017-02-25 15:19 GMT

 ವಾಶಿಂಗ್ಟನ್, ಫೆ. 25: ಶುಕ್ರವಾರ ನಡೆದ ಅನೌಪಚಾರಿಕ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವುದರಿಂದ ಹಲವಾರು ಸುದ್ದಿ ಮಾಧ್ಯಮ ಸಂಸ್ಥೆಗಳನ್ನು ಶ್ವೇತಭವನ ತಡೆದಿದೆ. ಮಾಧ್ಯಮಗಳ ವಿರುದ್ಧ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧ ಸಾರಿರುವಂತೆಯೇ, ಈ ಅಚ್ಚರಿಯ ಮತ್ತು ಅಪರೂಪದ ಬೆಳವಣಿಗೆ ನಡೆದಿದೆ.

ಸಿಎನ್‌ಎನ್, ನ್ಯೂಯಾರ್ಕ್ ಟೈಮ್ಸ್, ಪೊಲಿಟಿಕೊ, ಲಾಸ್ ಏಂಜಲಿಸ್ ಟೈಮ್ಸ್ ಮತ್ತು ಬಝ್‌ಫೀಡ್ ಸಂಸ್ಥೆಗಳಿಗೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಲು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಿಯಾನ್ ಸ್ಪೈಸರ್ ಅನುಮತಿ ನೀಡಲಿಲ್ಲ.

ಆದರೆ, ಕನ್ಸರ್ವೇಟಿವ್ (ಟ್ರಂಪ್ ಪ್ರತಿನಿಧಿಸುವ ರಿಪಬ್ಲಿಕನ್ ಪಕ್ಷದ ಬೆಂಬಲಿಗರು) ಸುದ್ದಿ ಮಾಧ್ಯಮಗಳನ್ನು ಪ್ರತಿನಿಧಿಸುವ ವರದಿಗಾರರು ಸೇರಿದಂತೆ ಇತರ ಹಲವಾರು ವರದಿಗಾರರಿಗೆ ಅನುಮತಿ ನೀಡಲಾಗಿತ್ತು.

ಇದೇ ದಿನದಂದು ಕನ್ಸರ್ವೇಟಿವ್ ಪೊಲಿಟಿಕಲ್ ಆ್ಯಕ್ಷನ್ ಕಾನ್ಫರೆನ್ಸ್ (ಸಿಪಿಎಸಿ)ನ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಟ್ರಂಪ್, ಪತ್ರಕರ್ತರ ವಿರುದ್ಧ ಇನ್ನೊಂದು ಸುತ್ತಿನ ದಾಳಿ ನಡೆಸಿದರು. ಪತ್ರಕರ್ತರನ್ನು ‘ಅಪ್ರಾಮಾಣಿಕರು’ ಮತ್ತು ‘ನಕಲಿ’ ಎಂದು ಕರೆದ ಅವರು, ತನ್ನ ಆಡಳಿತದ ಬಗ್ಗೆ ಮಾಡುವ ವರದಿಗಳಲ್ಲಿ ಅನಾಮಧೇಯ ಮೂಲಗಳ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಇದೇ ಟ್ರಂಪ್ ತನ್ನ ಅಧ್ಯಕ್ಷೀಯ ಪ್ರಚಾರದ ವೇಳೆ ಪ್ರತಿದಿನವೆಂಬಂತೆ ಪತ್ರಿಕೆಗಳ ವಿರುದ್ಧ ಹರಿಹಾಯುತ್ತಿದ್ದರು ಹಾಗೂ ಹತ್ತಕ್ಕೂ ಅಧಿಕ ಸುದ್ದಿ ಮಾಧ್ಯಮಗಳು ತನ್ನ ಕಾರ್ಯಕ್ರಮಗಳ ವರದಿ ಮಾಡದಂತೆ ನಿರ್ಬಂಧ ವಿಧಿಸಿದ್ದರು.

ಟ್ರಂಪ್ ಆಡಳಿತದ ಪರವಾಗಿ ವರದಿ ಮಾಡುವ ಫಾಕ್ಸ್ ನ್ಯೂಸ್, ಬ್ರೈಟ್‌ಬಾರ್ಟ್ ಮತ್ತು ವಾಶಿಂಗ್ಟನ್ ಟೈಮ್ಸ್‌ಗಳ ಹೆಸರು ಆಹ್ವಾನಿತ ಪತ್ರಿಕೆಗಳ ಪಟ್ಟಿಯಲ್ಲಿವೆ.
ಪಟ್ಟಿಯಲ್ಲಿ ಸಿಬಿಎಸ್, ಎನ್‌ಬಿಸಿ, ಎಬಿಸಿ, ವಾಲ್‌ಸ್ಟ್ರೀಟ್ ಜರ್ನಲ್, ಬ್ಲೂಮ್‌ಬರ್ಗ್, ಟೈಮ್ ಮತ್ತು ಅಸೋಸಿಯೇಟಡ್ ಪ್ರೆಸ್‌ನ ಹೆಸರುಗಳೂ ಇವೆ.

ಇತರ ಪತ್ರಿಕೆಗಳನ್ನು ಬಹಿಷ್ಕರಿಸಿರುವುದನ್ನು ಪ್ರತಿಭಟಿಸಿ ಅಸೋಸಿಯೇಟಡ್ ಪ್ರೆಸ್ ಮತ್ತು ಟೈಮ್ ಪತ್ರಿಕೆಗಳೂ ಪತ್ರಿಕಾಗೋಷ್ಠಿಯನ್ನು ಬಹಿಷ್ಕರಿಸಿದವು.

ಅಸ್ವೀಕಾರಾರ್ಹ: ಸಿಎನ್‌ಎನ್

‘ಶ್ವೇತಭವನದ ಪತ್ರಿಕಾಗೋಷ್ಠಿಗಳಿಗೆ ನಿರ್ದಿಷ್ಟ ಮಾಧ್ಯಮ ಗುಂಪುಗಳ ಪತ್ರಕರ್ತರನ್ನು ನಿಷೇಧಿಸಿರುವುದು ‘ಅಸ್ವೀಕಾರಾರ್ಹ’ ಎಂದು ಸಿಎನ್‌ಎನ್ ನಿರೂಪಕ ಜೇಕ್ ಟ್ಯಾಪರ್ ತನ್ನ ಶುಕ್ರವಾರ ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಹೇಳಿದರು.

‘‘ಇದು ಅನುಚಿತ ನಡವಳಿಕೆ. ಈ ಶ್ವೇತಭವನ ಸ್ವತಂತ್ರ ಪತ್ರಿಕೋದ್ಯಮವನ್ನು ಸಹಿಸುವುದಿಲ್ಲ ಎಂದು ಕಾಣುತ್ತದೆ. ಇದಕ್ಕೊಂದು ಪದವಿದೆ- ಅನ್ ಅಮೆರಿಕನ್ (ಅಮೆರಿಕಕ್ಕೆ ಹೊರತಾದುದು)’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News