ಯಕ್ಷಧ್ರುವ ಪಟ್ಲ ಸಂಭ್ರಮ 2017: ಕರೆಯೋಲೆ ಬಿಡುಗಡೆ

Update: 2017-02-25 18:49 GMT

ಮಂಗಳೂರು, ಫೆ.25: ಯುವ ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಆರಂಭಿಸಲಾದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ವತಿಯಿಂದ ಮೇ 28ರಂದು ನಡೆಯಲಿರುವ ಯಕ್ಷ ಧ್ರುವ ಪಟ್ಲ ಸಂಭ್ರಮ-2017ರ ಕರೆಯೋಲೆ ಬಿಡುಗಡೆ ಕಾರ್ಯಕ್ರಮ ಶನಿವಾರ ನಡೆಯಿತು.

ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರೆಯೋಲೆ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಯಕ್ಷಗಾನ ಅಳಿದುಹೋಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿರುವ ಸಮಯದಲ್ಲೇ ಯಕ್ಷಗಾನ ಕ್ಷೇತ್ರವನ್ನು ಉತ್ತೇಜಿಸುವ ಕಾರ್ಯಕ್ರಮಗಳು ನಡೆಯುತ್ತಿರುವುದು ಅಭಿನಂದನಾರ್ಹ ಎಂದರು. ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಮೇ 28ರಂದು ಸಹ್ಯಾದ್ರಿ ಕಾಲೇಜಿನ ಎದುರಿನ ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ಭಾಗವತ ಬಲಿಪ ನಾರಾಯಣ ಭಾಗವತರಿಗೆ 1 ಲಕ್ಷ ರೂ. ನಗದಿನೊಂದಿಗೆ ಯಕ್ಷ ಧ್ರುವ ಪಟ್ಲ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. ಪಟ್ಲ ಸಂಭ್ರಮ ಕಾರ್ಯಕ್ರಮದಲ್ಲಿ ಯಕ್ಷಗಾನ ಪೂರ್ವರಂಗ, ಯಕ್ಷಗಾನ ಕಲಾವಿದರು ಹಾಗೂ ಅವರ ಮನೆಯವರಿಗೆ ಉಚಿತ ವೈದ್ಯಕೀಯ ತಪಾಸಣೆ, ಟ್ರಸ್ಟ್‌ನಸದಸ್ಯರು ಹಾಗೂ ಯಕ್ಷಾಭಿಮಾನಿಗಳಿಂದ ರಕ್ತದಾನ ಶಿಬಿರ, ಏಳು ಭಾಗವತರ ಅಮೋಘ ಭಾಗವತಿಕೆ, ಯಕ್ಷಸಪ್ತಸ್ವರ, ಮಹಿಳಾ ಕಲಾವಿದರಿಂದ ಯಕ್ಷಗಾನ ವೈಭವ, ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ತಾಳ ಮದ್ದಳೆ, ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ, ಅಶಕ್ತ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ದ್ವಿತೀಯ ಪಿಯುಸಿ ಹಾಗೂ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ ಕಲಾವಿದರ ಮಕ್ಕಳಿಗೆ ಚಿನ್ನದ ಪದಕ, 15 ಅಶಕ್ತ ಕಲಾವಿದರಿಗೆ ತಲಾ 50 ಸಾವಿರ ರೂ. ಗೌರವಧನ, ಐದು ಜನ ಕಲಾವಿದರಿಗೆ ಹಾಗೂ ಇಬ್ಬರು ಮಹಿಳಾ ಕಲಾವಿದೆಯರಿಗೆ ಯಕ್ಷಧ್ರುವ ಕಲಾ ಗೌರವ, ಹಾಸ್ಯ ಕಲಾವಿದರಿಂದ ಯಕ್ಷಹಾಸ್ಯ ವೈಭವ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ ಎಂದವರು ವಿವರ ನೀಡಿದರು. ಪಟ್ಲ ಯಕ್ಷಾಶ್ರಯ ಯೋಜನೆಯಡಿ 100 ಮನೆಗಳ ನಿರ್ಮಾಣ

ಟ್ರಸ್ಟ್‌ಗೆ ಮೂರು ವರ್ಷ ತುಂಬುವ ವೇಳೆಗೆ ನಿವೇಶನ ರಹಿತ 100 ಕಲಾವಿದರಿಗೆ ಪಟ್ಲ ಯಕ್ಷಾಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಪಟ್ಲ ಸತೀಶ್ ಶೆಟ್ಟಿ ಈ ಸಂದರ್ಭ ತಿಳಿಸಿದರು. ಮಾತ್ರವಲ್ಲದೆ 15 ವರ್ಷ ವೃತ್ತಿ ಕಲಾವಿದರಾಗಿ ಸೇವೆ ಸಲ್ಲಿಸಿರುವ 60 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರಿಗೆ ಮಾಸಿಕ 1,000 ರೂ. ಮಾಸಾಶನ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭ ಸವಣೂರು ಸೀತಾರಾಮ ರೈ, ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ಸಂತೋಷ್ ಕುಮಾರ್ ರೈ, ಪೂರ್ಣಿಮಾ ಯತೀಶ್ ರೈ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಉಪಾಧ್ಯಕ್ಷ ಡಾ. ಮನು, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿ.ಎ. ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ್ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಜತೆ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News