×
Ad

ಜೇಟ್ಲಿ ಬ್ಯಾಂಕ್ ಖಾತೆ, ಆದಾಯ ತೆರಿಗೆ ಪಾವತಿ ವಿವರ ಕೇಳಿ ಹೈಕೋರ್ಟ್ ಗೆ ಕೇಜ್ರಿವಾಲ್ ಅರ್ಜಿ

Update: 2017-02-26 09:34 IST

ಹೊಸದಿಲ್ಲಿ, ಫೆ.26: ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಬ್ಯಾಂಕ್ ಖಾತೆ ವಿವರಗಳು, ಆದಾಯ ತೆರಿಗೆ ಪಾವತಿ ರಿಟರ್ನ್ಸ್, ಸಂಪತ್ತು ತೆರಿಗೆ ವಿವರಗಳನ್ನು ನೀಡುವಂತೆ ಕೋರಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ವಿರುದ್ಧ ಹಾಗೂ ಇತರ ಐದು ಮಂದಿ ಆಮ್ ಆದ್ಮಿ ಮುಖಂಡರ ವಿರುದ್ಧ ಜೇಟ್ಲೆ ಸಲ್ಲಿಸಿರುವ ಮಾನಹಾನಿ ಪ್ರಕರಣದ ಸಂಬಂಧ ಈ ವಿವರ ನೀಡುವಂತೆ ಕೋರಿದ್ದಾರೆ.

ಕೇಜ್ರಿವಾಲ್ ಹಾಗೂ ಇತರರಿಂದ 10 ಕೋಟಿ ರೂಪಾಯಿ ಪರಿಹಾರ ಕೋರಿ ಜೇಟ್ಲಿ ಮಾನಹಾನಿ ಅರ್ಜಿ ಸಲ್ಲಿಸಿದ್ದಾರೆ. ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಹಣಕಾಸು ದುರ್ಬಳಕೆ ಪ್ರಕರಣದಲ್ಲಿ 2000 ಹಾಗೂ 2013ರಲ್ಲಿ ನಡೆದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ತಮ್ಮ ಹಾಗೂ ಕುಟುಂಬದ ಸಂಪತ್ತಿನ ಬಗ್ಗೆ ಮಾನಹಾನಿಕರ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆಪಾದಿಸಿ ಜೇಟ್ಲಿ ಮಾನಹಾನಿ ಅರ್ಜಿ ಸಲ್ಲಿಸಿದ್ದರು.

ಕ್ರಿಕೆಟ್ ಸಂಸ್ಥೆಗೆ ಸಲ್ಲಿಸಿದ ಸೇವೆಗಾಗಿ ತಾವು ಯಾವುದೇ ಪ್ರತಿಫಲ ಪಡೆದಿಲ್ಲ ಎಂದು ಜೇಟ್ಲಿ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅರ್ಜಿ ಸಲ್ಲಿಸಿ, ಹಿರಿಯ ಬಿಜೆಪಿ ಮುಖಂಡನ ಬ್ಯಾಂಕ್ ಖಾತೆ ವಿವರಗಳನ್ನು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News