ಹಿಂಜಾವೇಯಿಂದ ಪಡುಬಿದ್ರೆ ಪೊಲೀಸ್ ಠಾಣೆಗೆ ಮುತ್ತಿಗೆ

Update: 2017-02-26 05:14 GMT

ಪಡುಬಿದ್ರೆ, ಫೆ26: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ನಡೆದ ಹಲ್ಲೆ ಪ್ರಕರಣವೊಂದು ರಾಜಿಯಲ್ಲಿ ಇತ್ಯರ್ಥಗೊಂಡರೂ ಬಳಿಕ ಆರೋಪಿಯನ್ನು ಬಂಧಿಸಬೇಕು ಎಂದು ಪಟ್ಟುಹಿಡಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪಡುಬಿದ್ರೆ ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
 ಘಟನೆಯ ವಿವರ: ಮುದರಂಗಡಿಯ ಮುಖ್ಯರಸ್ತೆಯಲ್ಲಿ ಸಂಚರಿಸುತಿದ್ದ ಟೆಂಪೊ ಚಾಲಕ ಓವರ್‌ಟೇಕ್ ಮಾಡಿ ಹಾರ್ನ್ ಮಾಡಿರುವುದನ್ನು ಬೈಕ್ ಸವಾರ ಹಾರಿಸ್ ಎಂಬವರು ಪ್ರಶ್ನಿಸಿದ್ದರೆನ್ನಲಾಗಿದೆ. ಈ ವೇಳೆ ಟೆಂಪೋ ಹಾಗೂ ಹಾರಿಸ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಹಾರಿಸ್ ಅಟೆಂಪೊ ಚಾಲಕ ಭಾಸ್ಕರ್ ಮೇಲೆ ಹಲ್ಲೆ ನಡೆಸಿದ್ದ ಎಂದು ಹೇಳಲಾಗಿದೆ. ಆ ಬಳಿಕ ಪ್ರಕರಣ ಎರಡೂ ಕಡೆಯ ಜನ ಸೇರಿ ಹಲ್ಲೆ ನಡೆಸಿದ ಹಾರಿಸ್ ಕ್ಷಮೆ ಕೇಳುವ ಮೂಲಕ ರಾಜಿ ಸಂಧಾನದೊಂದಿಗೆ ಸುಖಾಂತ್ಯ ಕಂಡಿತ್ತು.

*ಠಾಣೆಗೆ ಮುತ್ತಿಗೆ: ಆದರೆ ಸಂಜೆ ಪಡುಬಿದ್ರೆ ಠಾಣೆಯಲ್ಲಿ ಸುಮಾರು ನೂರಾರು ಸಂಖ್ಯೆಯಲ್ಲಿ ಸೇರಿದ್ದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಭಾಸ್ಕರ್ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಬೇಕು ಎಂದು ಪಟ್ಟುಹಿಡಿದರು. ಈ ವೇಳೆ ಪೊಲೀಸರು ಮತ್ತು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಆದರೆ ಪ್ರಕರಣ ದಾಖಲಿಸದೆ ಬಂಧಿಸಲು ಆಗುವುದಿಲ್ಲ ಎಂದು ಪೊಲೀಸರು ಹೇಳಿದರೂ ಕಾರ್ಯಕರ್ತರು ಅವರ ಮಾತನ್ನು ಕೇಳದೆ ಕೂಡಲೇ ಬಂಧಿಸುವಂತೆ ಪಟ್ಟುಹಿಡಿದರು. ಈ ವೇಳೆ ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಸಹಿತ ಪ್ರತಿಭಟನಾಕಾರನ್ನು ಮನವೊಳಿಸಲು ಯತ್ನಿಸಿದರು. ಆದರೆ ಅಲ್ಲದೆ ರಾಜಕೀಯ ನಾಯಕರು ಈ ವಿಷಯಕ್ಕೆ ಮೂಗು ಸೇರಿಸುವುದು ಬೇಡ ಎಂದು ಹೇಳುವ ಮೂಲಕ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಒಂದು ಹಂತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಅರಿತ ಪೊಲೀಸರು ಪ್ರತಿಭಟನಾಕಾರರನ್ನು ಕಾಪು ಸರ್ಕಲ್ ಹಾಲಮೂರ್ತಿ, ಪಡುಬಿದ್ರೆ ಎಸ್ಸೈ ಸತೀಶ್ ಸಮಾಧಾನಿಸಲು ಯತ್ನಿಸಿದರು. ಆದರೆ ಇದಕ್ಕೂ ಜಗ್ಗದ ಪ್ರತಿಭಟನಾಕಾರರು ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿದರು. ಈ ವೇಳೆ ತಡೆದ ಪೊಲೀಸರ ವಿರುದ್ಧವೇ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಬಳಿಕ ಸ್ಥಳಕ್ಕಾಗಮಿಸಿದ ಎಎಸ್ಪಿ ವಿಷ್ಣುವರ್ಧನ್ ಪರಿಸ್ಥಿತಿ ತಿಳಿಗೊಳಿಸಿದರು. ದೂರು ದಾಖಲು: ರಾಜಿಯಲ್ಲಿ ಇತ್ಯರ್ಥಗೊಂಡರೂ ಬಳಿಕ ಹಿಂಜಾವೇ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಟೆಂಪೋ ಚಾಲಕ ಭಾಸ್ಕರ್ ಅವರನ್ನು ಬಳಿಕ ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಯಿತು. ಪೊಲೀಸರು ಅಲ್ಲಿಗೆ ತೆರಳಿ ದೂರು ಸ್ವೀಕರಿಸಿದರು. ಪ್ರಕರಣಕ್ಕೆ ಸಂಬಂಧಿಸಿ ಹಾರಿಸ್ ಮತ್ತಿತರರು ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News