ಬಂದ್ ಕರೆ ಕೊಟ್ಟವರಿಂದಲೇ ನಷ್ಟ ಭರಿಸಲು ಕ್ರಮಕ್ಕೆ ಸೂಚನೆ: ಸಚಿವ ರೈ

Update: 2017-02-26 06:04 GMT

ಮಂಗಳೂರು, ಫೆ.26: ಶನಿವಾರ ದ.ಕ. ಬಂದ್‌ಗೆ ಕರೆ ನೀಡಿದವರಿಂದಲೇ ಬಂದ್ ಸಂದರ್ಭ ಉಂಟಾಗಿರುವ ನಷ್ಟವನ್ನು ಭರಿಸುವ ಕುರಿತಂತೆ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಮಂಗಳೂರಿನಲ್ಲಿಂದು ಬೆಳಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಂದ್ ಸಂದರ್ಭ ಉಂಟಾಗುವ ನಷ್ಟವನ್ನು ಬಂದ್‌ಗೆ ಕರೆ ನೀಡಿದವರಿಂದಲೇ ಭರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಸೂಚಿಸುತ್ತೇನೆ ಎಂದವರು ಸ್ಪಷ್ಟಪಡಿಸಿದರು.

ಪಿಣರಾಯಿ ವಿಜಯನ್ ಅವರು ಸಂವಿಧಾನತ್ಮಕವಾಗಿ ಕೇರಳ ಮುಖ್ಯಮಂತ್ರಿಯಾಗಿ ಅಯ್ಕೆಯಾದವರು. ಸಾಂವಿಧಾನಿಕ ಹೊಣೆಗಾರಿಕೆಯಲ್ಲಿ ಅವರಿಗೆ ಭದ್ರತೆ ಕಲ್ಪಿಸಲಾಗಿದೆ ಎಂದರು.

ಮಂಗಳೂರಿಗೆ ಸರಕಾರಿ ನಗರ ಸಾರಿಗೆ ಬಸ್ ಸೇವೆ ಅಗತ್ಯ
ಬಂದ್ ಕರೆಯ ಹಿನ್ನೆಲೆಯಲ್ಲಿ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದ್ದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಮಂಗಳೂರಿಗೆ ಇನ್ನಷ್ಟು ಸರಕಾರಿ ನಗರ ಸಾರಿಗೆ ಬಸ್‌ಗಳ ಅಗತ್ಯವಿದೆ ಎಂದರು.

ಬಂದ್ ಕರೆ ಕಾರಣ ಪರೀಕ್ಷೆ ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಆರ್‌ಟಿಒ ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ. ಈ ಹಿನ್ನೆಲೆಯಲ್ಲಿ ಆರ್‌ಟಿಒ ಮೇಲೆ ಕ್ರಮಕ್ಕೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯುತ್ತೇನೆ ಎಂದರು.

ಸಚಿವ ಸಂಪುಟ ವಿಸ್ತರಣೆ: ಮಾಹಿತಿ ಇಲ್ಲ
ನಾಲ್ಕು ವರ್ಷ ಪೂರೈಸಿದ ರಾಜ್ಯ ಸಚಿವರುಗಳಿಗೆ ಕೊಕ್ ನೀಡಲಾಗುತ್ತದೆ ಎಂಬ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ರೈ, ‘‘ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ಆದರೆ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ತನಗೇನು ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಖಾದರ್ ವಿವಾದಾತ್ಮಕ ಹೇಳಿಕೆಗೆ ಸಮರ್ಥನೆ
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ರೈ, ಸಂವಿಧಾನಕ್ಕೆ ಅಪಚಾರ ಎಸಗುವವರಿಗೆ, ಮಹಾತ್ಮರ ಹತ್ಯೆಯಾದಾಗ ಸಿಹಿ ಹಂಚಿ ಸಂಭ್ರಮಿಸಿದವರಿಗೆ ಖಾದರ್ ಅವರ ಹೇಳಿಕೆ ಸರಿಯಾಗಿಯೇ ಇದೆ. ಇಲ್ಲಿ ಅದಕ್ಕಿಂತಲೂ ಗಂಭೀರ ಹೇಳಿಕೆಗಳನ್ನು ಕೊಟ್ಟವರಿದ್ದಾರೆ. ಬೆಂಕಿ ಹಚ್ಚುವುದಾಗಿ ಕೆಲವರು ಹೇಳಿಕೆ ನೀಡಿರುವಾಗ ಇದೇನು ಮಹಾ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News