ಗ್ರಾಮಕ್ಕೆ ನೀರು ಕೊಡದಿದ್ದಲ್ಲಿ ಹೋರಾಟ: ಸಜೀಪನಡು ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸೀರ್ ಎಚ್ಚರಿಕೆ

Update: 2017-02-26 06:50 GMT

ಬಂಟ್ವಾಳ, ಫೆ. 24: ಕರೋಪಾಡಿ ಬಹು ಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಸಜೀಪನಡು ಗ್ರಾಮವನ್ನು ಕೈಬಿಟ್ಟಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಜೀಪನಡು ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸೀರ್, ಈ ಯೋಜನೆಯ ಎರಡನೇ ಹಂತದ ಸಜೀಪಮುನ್ನೂರು ಯೋಜನೆಯಲ್ಲೂ ಸಜೀಪನಡು ಗ್ರಾಮವನ್ನು ಸೇರಿಸದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಕರೋಪಾಡಿ ಬಹು ಗ್ರಾಮ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ನೀರಿನ ಶುದ್ದೀಕರಣ ಘಟಕದ ಕಾಮಗಾರಿ ಅಂತಿಮ ಹಂತದಲ್ಲಿ ಇದೆ. 

ಈ ಯೋಜನೆಯಿಂದ ಸುತ್ತಮುತ್ತಲಿನ ಐದು ಗ್ರಾಮಕ್ಕೆ ನೀರು ಪೂರೈಕೆಯಾಗಲಿದ್ದು ಸಜೀಪನಡು ಗ್ರಾಮವನ್ನು ಕೂಡಾ ಪರಿಗಣಿಸಬೇಕೆಂದು ಈ ಹಿಂದೆ ಸಚಿವರಾದಿಯಾಗಿ ಅಧಿಕಾರಿಗಳಿಗೆ ಪಂಚಾಯತ್‌ನಿಂದ ಮನವಿಯನ್ನು ಸಲ್ಲಿಸಿತ್ತು. ಈ ಸಂದರ್ಭದಲ್ಲಿ ಈ ಯೋಜನೆಯ ಎರಡನೆ ಹಂತದ ಸಜೀಪಮುನ್ನೂರು ಯೋಜನೆಯಲ್ಲಿ ಸಜೀಪನಡು ಗ್ರಾಮವನ್ನು ಸೇರಿಸಿ ಗ್ರಾಮಸ್ಥರಿಗೆ ನೀರು ಪೂರೈಸುವ ಭರವಸೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ದೊರೆತಿತ್ತು. ಆದರೆ ಈ ಬಗ್ಗೆ ಕಡತ ಪರಿಶೀಲನೆ ನಡೆಸಿದಾಗ ಸಜೀಪಮುನ್ನೂರು ಯೋಜನೆಯಲ್ಲೂ ಸಜೀಪನಡು ಗ್ರಾಮವನ್ನು ಕೈಬಿಡಲಾಗಿದೆ ಎಂದು ಸಜೀಪನಡು ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸೀರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸಜೀಪನಡು ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ನೀರು ಒದಗಿಸದಿದ್ದಲ್ಲಿ ಹೋರಾಟ ನಡೆಸುವ ಕುರಿತು ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿದ್ದು ಈ ಬಗ್ಗೆ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆಹಾರ ಸಚಿವ ಯು.ಟಿ.ಖಾದರ್ ಹಾಗೂ ಜಿಲ್ಲಾಧಿಕಾರಿ ಸಹಿತ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸಜೀಪನಡು ಗ್ರಾಮದಲ್ಲಿರುವ ಸರಕಾರಿ ಜಮೀನಿನ ಪೈಕಿ ಒಂಭತ್ತು ಎಕರೆಯನ್ನು ಬಂಟ್ವಾಳ ಪುರಸಭೆಯ ಘನತ್ಯಾಜ್ಯ ಸಂಸ್ಕರಣಾ ಘಟಕ, ಎರಡು ಎಕರೆಯನ್ನು ಕರೋಪಾಡಿ ಬಹುಗ್ರಾಮ ಕುಡಿಯುವ ನೀರಿನ ಸ್ಥಾವರ ನಿರ್ಮಾಣಕ್ಕೆ ಒದಗಿಸಲಾಗಿರುವುದರಿಂದ ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇದೀಗ ಸರಕಾರಿ ಜಮೀನು ಇಲ್ಲದಂತಾಗಿದೆ. ನಿವೇಶನಕ್ಕಾಗಿ ಬಡ ಗ್ರಾಮಸ್ಥರಿಂದ ನೂರಾರು ಅರ್ಜಿಗಳು ಬಂದರೂ ಅವರಿಗೆ ನಿವೇಶನ ಒದಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದೇವೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News