ಶ್ವೇತಭವನದ ಉದ್ಯೋಗಕ್ಕೆ ಮುಸ್ಲಿಮ್ ಮಹಿಳೆ ರಾಜೀನಾಮೆ

Update: 2017-02-26 14:38 GMT

ವಾಶಿಂಗ್ಟನ್, ಫೆ. 26: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಮುಸ್ಲಿಮ್ ಪ್ರವೇಶ ನಿಷೇಧ ನೀತಿಯನ್ನು ಜಾರಿಗೆ ತಂದ ಬಳಿಕ, ಶ್ವೇತಭವನದಲ್ಲಿ ಕೆಲಸ ಮಾಡುತ್ತಿದ್ದ ಹಿಜಾಬ್‌ಧಾರಿಣಿ ಮುಸ್ಲಿಮ್ ಮಹಿಳೆಯೊಬ್ಬರು ರಾಜೀನಾಮೆ ನೀಡಿದ್ದಾರೆ.

ಬಾಂಗ್ಲಾದೇಶ ಮೂಲದ ರುಮಾನಾ ಅಹ್ಮದ್ ಟ್ರಂಪ್ ಆಡಳಿತದಲ್ಲಿ ಕೇವಲ ಎಂಟು ದಿನಗಳ ಕಾಲ ಕೆಲಸ ಮಾಡಿದ್ದಾರೆ.
ರುಮಾನಾರನ್ನು 2011ರಲ್ಲಿ ಶ್ವೇತಭವನದಲ್ಲಿ ಕೆಲಸಕ್ಕೆ ನೇಮಿಸಲಾಗಿತ್ತು. ಬಳಿಕ ಅವರು ರಾಷ್ಟ್ರೀಯ ಭದ್ರತಾ ಮಂಡಳಿ (ಎನ್‌ಎಸ್‌ಸಿ)ಯಲ್ಲಿ ಕೆಲಸ ಮಾಡಿದರು.

ಟ್ರಂಪ್ ನಮ್ಮ ಸಮುದಾಯದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾಗ, 2016ರ ಹೆಚ್ಚಿನ ಭಾಗವನ್ನು ನಾನು ಇತರ ಹೆಚ್ಚಿನ ಅಮೆರಿಕನ್ ಮುಸ್ಲಿಮರಂತೆ ‘ಗಾಬರಿ’ಯಿಂದಲೇ ಗಮನಿಸುತ್ತಿದ್ದೆ ಎಂದು ಅವರು ‘ದ ಅಟ್ಲಾಂಟಿಕ್’ನಲ್ಲಿ ಪ್ರಕಟಗೊಂಡ ಲೇಖನವೊಂದರಲ್ಲಿ ಅವರು ಬರೆದಿದ್ದಾರೆ.

‘‘ಇದರ ಹೊರತಾಗಿಯೂ, ಅಥವಾ ಇದೇ ಕಾರಣಕ್ಕಾಗಿ, ಟ್ರಂಪ್ ಆಡಳಿತದಲ್ಲಿ ಎನ್‌ಎಸ್‌ಸಿ ಉದ್ಯೋಗಿಯಾಗಿ ಮುಂದುವರಿಯಲು ನಾನು ಪ್ರಯತ್ನಿಸಬೇಕು ಎಂದು ಯೋಚಿಸಿದೆ. ನೂತನ ಅಧ್ಯಕ್ಷರು ಹಾಗೂ ಅವರ ಸಹಾಯಕರಿಗೆ ಇಸ್ಲಾಮ್ ಮತ್ತು ಅಮೆರಿಕದ ಮುಸ್ಲಿಮ್ ನಾಗರಿಕರ ಕುರಿತು ಹೆಚ್ಚಿನ ತಿಳುವಳಿಕೆ ನೀಡಲು ನಾನು ಮುಂದಾಗಬೇಕು ಎಂದು ಬಯಸಿದೆ’’ ಎಂದರು.

‘‘ನಾನು ಎಂಟು ದಿನಗಳ ಕಾಲ ಮಾತ್ರ ಉಳಿದೆ. ಏಳು ಮುಸ್ಲಿಮ್ ಬಾಹುಳ್ಯದ ದೇಶಗಳ ಪ್ರವಾಸಿಗರು ಮತ್ತು ಸಿರಿಯದ ನಿರಾಶ್ರಿತರಿಗೆ ಅಮೆರಿಕ ಪ್ರವೇಶವನ್ನು ಟ್ರಂಪ್ ನಿಷೇಧಿಸಿದಾಗ, ನನ್ನನ್ನು ಮತ್ತು ನನ್ನಂಥ ಜನರನ್ನು ಸಹ ನಾಗರಿಕರು ಎಂದು ನೋಡದೆ ಬೆದರಿಕೆಯೆಂಬಂತೆ ನೋಡುವ ಆಡಳಿತದಲ್ಲಿ ಕೆಲಸ ಮಾಡುವುದು ಸಾಧ್ಯವಿಲ್ಲ ಎಂದು ನನಗೆ ಮನದಟ್ಟಾಯಿತು’’ ಎಂದು ರುಮಾನಾ ಬರೆದಿದ್ದಾರೆ.


ಅಮೆರಿಕದ ಶ್ರೇಷ್ಠತೆಯನ್ನು ಬಿಂಬಿಸುವುದು ನನ್ನ ಕೆಲಸವಾಗಿತ್ತು

‘‘ನನ್ನ ದೇಶ ಯಾವುದರ ಪರವಾಗಿದೆಯೋ ಅದನ್ನು ಅತ್ಯುತ್ತಮ ರೀತಿಯಲ್ಲಿ ಬಿಂಬಿಸುವುದು ಮತ್ತು ಕಾಪಾಡಿಕೊಂಡು ಬರುವುದು ನನ್ನ ಕೆಲಸವಾಗಿತ್ತು. ನಾನು ಹಿಜಾಬ್ ಧರಿಸುವ ಮುಸ್ಲಿಮ್ ಮಹಿಳೆ. ಶ್ವೇತಭವನದ ವೆಸ್ಟ್ ವಿಂಗ್‌ನಲ್ಲಿ ನಾನೊಬ್ಬಳೇ ಹಿಜಾಬ್ ಧರಿಸುವುದು. ಒಬಾಮ ಆಡಳಿತದಲ್ಲಿ ನಾನು ಇಲ್ಲಿಗೆ ಬೇಕಾದವಳು ಹಾಗೂ ಇಲ್ಲಿಗೆ ಸೇರಿದವಳು ಎಂಬ ಭಾವನೆ ನನ್ನಲ್ಲಿ ಬರುತ್ತಿತ್ತು’’ ಎಂದು ರುಮಾನಾ ‘ದಿ ಅಟ್ಲಾಂಟಿಕ್’ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News