ಕರಾಚಿಯಿಂದ ಮದೀನಾಕ್ಕೆ ವಿಮಾನದಲ್ಲಿ ನಿಂತುಕೊಂಡೇ ಪ್ರಯಾಣಿಸಿದರು !: ತನಿಖೆಗೆ ಆದೇಶ

Update: 2017-02-26 14:47 GMT

ಇಸ್ಲಾಮಾಬಾದ್, ಫೆ. 26: ಕಳೆದ ತಿಂಗಳು ಸೌದಿ ಅರೇಬಿಯಕ್ಕೆ ಹೋಗುವ ಪಾಕಿಸ್ತಾನದ ಸರಕಾರಿ ವಿಮಾನಯಾನ ಕಂಪೆನಿ ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ)ನ ವಿಮಾನವೊಂದರಲ್ಲಿ ಏಳು ಪ್ರಯಾಣಿಕರು ನಿಂತುಕೊಂಡೇ ಪ್ರಯಾಣಿಸಿರುವುದು ದೊಡ್ಡ ವಿವಾದವಾಗಿ ಪರಿಣಮಿಸಿದೆ.

ಸುರಕ್ಷತಾ ನಿಯಮಗಳನ್ನು ಸಾರಾಸಗಟಾಗಿ ಗಾಳಿಗೆ ತೂರಿದ ಘಟನೆಯ ಬಗ್ಗೆ ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 ಜನವರಿ 20ರಂದು ಕರಾಚಿಯಿಂದ ಮದೀನಾಕ್ಕೆ ಹೊರಟ ಪಿಕೆ-743 ವಿಮಾನದೊಳಕ್ಕೆ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗಿತ್ತು ಹಾಗೂ ಆ ಏಳು ಪ್ರಯಾಣಿಕರು ಮೂರು ಗಂಟೆಗೂ ಅಧಿಕ ಪ್ರಯಾಣವನ್ನು ನಿಂತುಕೊಂಡೇ ಪ್ರಯಾಣಿಸಬೇಕಾಗಿತ್ತು ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಈ ಘಟನೆಯನ್ನು ಪಿಐಎ ಆಡಳಿತ ಲಘುವಾಗಿ ತೆಗೆದುಕೊಂಡಿತ್ತು, ಹಾಗಾಗಿ, ಈ ವಿಚಿತ್ರ ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅದು ಮುಂದಾಗಿರಲಿಲ್ಲ.

ಆಂತರಿಕ ತನಿಖೆಯನ್ನು ಆರಂಭಿಸಲಾಗಿದೆ ಹಾಗೂ ಅದಕ್ಕೆ ಯಾರು ಕಾರಣ ಎಂಬುದು ಪತ್ತೆಯಾದ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಿಐಎ ವಕ್ತಾರ ದನ್ಯಾಲ್ ಗಿಲಾನಿ ಹೇಳಿದರು.

ಆಮ್ಲಜನಕದ ಪೂರೈಕೆ ಇರುವುದಿಲ್ಲ

ವಿಮಾನದಲ್ಲಿ ನಿಂತುಕೊಂಡು ಪ್ರಯಾಣಿಸುವುದು ಗಂಭೀರ ವಾಯು ಸುರಕ್ಷತಾ ಉಲ್ಲಂಘನೆಯಾಗಿದೆ ಎಂದು ವರದಿ ಹೇಳಿದೆ. ಆಸನವಿಲ್ಲದ ಪ್ರಯಾಣಿಕರಿಗೆ ಆಮ್ಲಜನಕ ಸಿಗುವುದಿಲ್ಲ ಹಾಗೂ ತುರ್ತು ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಅವರು ಅಡ್ಡಿಯಾಗುತ್ತಾರೆ ಎಂದಿದೆ.

ಪಾಕ್ ವಿಮಾನವನ್ನು ಅಡ್ಡಗಟ್ಟಿದ ಬ್ರಿಟನ್ ಯುದ್ಧ ವಿಮಾನಗಳು

ಲಂಡನ್‌ನ ಹೀತ್ರೂ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ) ವಿಮಾನವೊಂದನ್ನು ಬ್ರಿಟನ್ ಯುದ್ಧ ವಿಮಾನಗಳು ಬೇರೊಂದು ನಿಲ್ದಾಣಕ್ಕೆ ತಿರುಗಿಸಿದ ಘಟನೆ ಮಂಗಳವಾರ ನಡೆದಿದೆ.

ಇದಕ್ಕೆ ವಿಮಾನದಲ್ಲಿದ್ದ ‘ಸಮಸ್ಯಾತ್ಮಕ ಪ್ರಯಾಣಿಕನೊಬ್ಬ’ ಕಾರಣ ಎಂದು ಪೊಲೀಸರು ಹೇಳಿದ್ದಾರೆ.

‘‘ವಿಮಾನವನ್ನು ತಡೆದು ಸುರಕ್ಷಿತವಾಗಿ ಸ್ಟಾನ್‌ಸ್ಟೆಡ್ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು’’ ಎಂದು ರಾಯಲ್ ಏರ್ ಪೋರ್ಸ್ (ಆರ್‌ಎಎಫ್) ವಕ್ತಾರರೊಬ್ಬರು ತಿಳಿಸಿದರು.

‘‘ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯುತ್ತಿದ್ದಂತೆಯೇ ಓರ್ವ ಪ್ರಯಾಣಿಕನನ್ನು ಬಂಧಿಸಲಾಯಿತು’’ ಎಂದು ಲಂಡನ್ ಮೆಟ್ರೊಪಾಲಿಟನ್ ಪೊಲೀಸರು ಹೇಳಿದರು. ಹೆಚ್ಚಿನ ವಿವರಗಳನ್ನು ನೀಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News