ಹಾಸ್ಯ ವೀಡಿಯೊದ ಚೇಷ್ಟೆ ದೃಶ್ಯದಲ್ಲಿ ಭಾಗವಹಿಸುತ್ತಿದ್ದೇನೆ ಎಂದು ತಿಳಿದಿದ್ದೆ

Update: 2017-02-26 16:08 GMT

 ಹನೋಯಿ (ವಿಯೆಟ್ನಾಂ), ಫೆ. 26: ಹಾಸ್ಯ ವೀಡಿಯೊಗಾಗಿ ನಡೆಸಲಾದ ಚೇಷ್ಟೆಯ ಕೃತ್ಯವೊಂದರಲ್ಲಿ ತಾನು ಪಾಲ್ಗೊಳ್ಳುತ್ತಿದ್ದೇನೆ ಎಂಬುದಾಗಿ ತಾನು ಭಾವಿಸಿದ್ದೆ ಎಂದು ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಸಹೋದರ ಕಿಮ್ ಜಾಂಗ್ ನಾಮ್‌ರ ಕೊಲೆ ಆರೋಪಿಯಾಗಿರುವ ವಿಯೆಟ್ನಾಂ ಮಹಿಳೆ ಅಧಿಕಾರಿಗಳಿಗೆ ಹೇಳಿದ್ದಾಳೆ ಎಂದು ವಿಯೆಟ್ನಾಂ ಶನಿವಾರ ಹೇಳಿದೆ.

ವಿಯೆಟ್ನಾಂ ಮಹಿಳೆ ಡೋನ್ ತಿ ಹುವೊಂಗ್ ಮತ್ತು ಇಂಡೋನೇಶ್ಯದ ಓರ್ವ ಮಹಿಳೆಯನ್ನು ನಾಮ್ ಹತ್ಯೆಗೆ ಸಂಬಂಧಿಸಿ ಬಂಧಿಸಲಾಗಿದೆ.
ಮಲೇಶ್ಯದ ಕೌಲಾಲಂಪುರ ವಿಮಾನ ನಿಲ್ದಾಣದಲ್ಲಿ ಫೆಬ್ರವರಿ 13ರಂದು ಕಿಮ್ ಜಾಂಗ್ ನಾಮ್‌ರ ಮುಖದ ಮೇಲೆ ಮಾರಕ ವಿಷವನ್ನು ಈ ಮಹಿಳೆಯರು ಸಿಂಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಶೀತಲ ಸಮರ ಕಾಲದ ಮಾದರಿಯಲ್ಲಿ ಈ ಕೊಲೆ ನಡೆಸುವಂತೆ ತನ್ನನ್ನು ವಂಚಿಸಲಾಗಿದೆ ಎಂದು ತಾನು ಭಾವಿಸಿರುವುದಾಗಿ ಹುವೊಂಗ್ ವಿಯೆಟ್ನಾಂ ವಿದೇಶ ಸಚಿವಾಲಯಕ್ಕೆ ತಿಳಿಸಿದ್ದಾಳೆ.

‘‘ರಾಯಭಾರ ಕಚೇರಿಯೊಂದಿಗೆ ಮಾತನಾಡಿದಾಗ ಆಕೆಯ ಆರೋಗ್ಯ ಸ್ಥಿರವಾಗಿತ್ತು. ತಮಾಷೆಯ ವೀಡಿಯೊ ದೃಶ್ಯವೊಂದರಲ್ಲಿ ಭಾಗವಹಿಸುತ್ತಿದ್ದೇನೆ ಎಂದು ತಾನು ಭಾವಿಸಿದ್ದೆ ಎಂದು ಹುವೊಂಗ್ ಹೇಳಿದಳು’’ ಎಂದು ವಿಯೆಟ್ನಾಂ ವಿದೇಶ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

ತನಿಖೆಯಲ್ಲಿ ಮಲೇಶ್ಯ ಅಧಿಕಾರಿಗಳೊಂದಿಗೆ ಸಹಕರಿಸುವುದಾಗಿ ಸಚಿವಾಲಯ ಹೇಳಿದೆ.

‘ಟಿವಿ ಚೇಷ್ಟೆ’ ನಡೆಸಲು 6,000 ರೂ. ನೀಡಲಾಗಿತ್ತು: ಆರೋಪಿ ಇಂಡೋನೇಶ್ಯ ಮಹಿಳೆ

ಕೌಲಾಲಂಪುರ, ಫೆ. 26: ಟಿವಿ ಹಾಸ್ಯ ಕಾರ್ಯಕ್ರಮದ ಚೇಷ್ಟೆಯೊಂದರಲ್ಲಿ ಭಾಗವಹಿಸುವಂತೆ ತನಗೆ ಹೇಳಲಾಗಿತ್ತು ಹಾಗೂ ಅದಕ್ಕಾಗಿ ತನಗೆ ಕೇವಲ 400 ಆರ್‌ಎಂ (ಮಲೇಶ್ಯನ್ ಕರೆನ್ಸಿ) (ಸುಮಾರು 6,000 ರೂಪಾಯಿ) ನೀಡಲಾಗಿತ್ತು ಎಂದು ಕಿಮ್ ಜಾಂಗ್ ನಾಮ್ ಹತ್ಯೆ ಪ್ರಕರಣದಲ್ಲಿ ಬಂಧಿತಳಾಗಿರುವ ಇಂಡೋನೇಶ್ಯದ ಮಹಿಳೆ ಹೇಳಿದ್ದಾಳೆ ಎಂದು ಹಿರಿಯ ರಾಜತಾಂತ್ರಿಕರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ನಾಮ್ ಹತ್ಯೆಯಾದ ತಕ್ಷಣ ಸಿಟಿ ಅಸಿಯಾ ಎಂಬ ಮಹಿಳೆಯನ್ನು ಬಂಧಿಸಲಾಗಿತ್ತು.

‘‘ಈ ಕೃತ್ಯ ನಡೆಸುವಂತೆ ಯಾರೋ ನನಗೆ ಹೇಳಿದರು ಎಂದು ಸಿಟಿ ಹೇಳಿದ್ದಾಳೆ’’ ಎಂದು ಹಿರಿಯ ರಾಜತಾಂತ್ರಿಕ ಎರ್ವಿನ್ ಶನಿವಾರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News