×
Ad

ನೌಕಾ ಸಮರಾಭ್ಯಾಸಕ್ಕೆ ಇರಾನ್ ಚಾಲನೆ

Update: 2017-02-26 21:34 IST

ದುಬೈ, ಫೆ. 26: ಕೊಲ್ಲಿ ಸಮುದ್ರ ಮತ್ತು ಹಿಂದೂ ಮಹಾ ಸಾಗರದಲ್ಲಿ ಇರಾನ್ ರವಿವಾರ ನೌಕಾ ಸಮರಾಭ್ಯಾಸಕ್ಕೆ ಚಾಲನೆ ನೀಡಿದೆ ಎಂದು ಓರ್ವ ನೌಕಾ ಕಮಾಂಡರ್ ಹೇಳಿದ್ದಾರೆ.

ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಇರಾನನ್ನು ‘ನಿಗಾ ಪಟ್ಟ’ಯಲ್ಲಿ ಇರಿಸಿದ ಬಳಿಕ ಉಭಯ ದೇಶಗಳ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಕಳೆದ ತಿಂಗಳು ಅಧಿಕಾರಕ್ಕೆ ಬಂದಂದಿನಿಂದಲೂ ಟ್ರಂಪ್ ಇರಾನ್ ವಿರುದ್ಧ ಕಠಿಣ ನಿಲುವು ತಳೆದಿದ್ದಾರೆ. ಜನವರಿ 29ರಂದು ಇರಾನ್ ಕ್ಷಿಪಣಿ ಪರೀಕ್ಷೆಯೊಂದನ್ನು ನಡೆಸಿದ ಬಳಿಕ ಹಭಯ ದೇಶಗಳ ನಡುವೆ ಸ್ಫೋಟಕ ಪರಿಸ್ಥಿತಿ ನೆಲೆಸಿದೆ. ಇರಾನ್ ಬೆಂಕಿಯೊಂದಿಗೆ ಸರಸವಾಡುತ್ತಿದೆ ಎಂದು ಆರೋಪಿಸಿರುವ ಟ್ರಂಪ್, ಅದರ ವಿರುದ್ಧ ಎಲ್ಲ ಆಯ್ಕೆಗಳೂ ಮುಕ್ತವಾಗಿವೆ ಎಂದು ಹೇಳಿದ್ದರು.

ಭಯೋತ್ಪಾದನೆ ಮತ್ತು ಕಡಲ್ಗಳ್ಳರ ವಿರುದ್ಧದ ಕಾರ್ಯಾಚರಣೆಗಾಗಿ ಸೈನಿಕರಿಗೆ ತರಬೆತಿ ನೀಡಲು ಇರಾನ್‌ನ ವಾರ್ಷಿಕ ಯುದ್ಧಾಭ್ಯಾಸಗಳು ಒಮನ್ ಕೊಲ್ಲಿ, ಹೋರ್ಮಝ್ ಜಲಸಂಧಿ, ಬಾಬ್ ಎಲ್-ಮಂಡಬ್ ಮತ್ತು ಹಿಂದೂ ಮಹಾ ಸಾಗರದ ಉತ್ತರದ ಭಾಗಗಳಲ್ಲಿ ನಡೆಯಲಿವೆ ಎಂದು ರಿಯರ್ ಅಡ್ಮಿರಲ್ ಹಬೀಬುಲ್ಲಾ ಸಯ್ಯಿರಿ ಹೇಳಿರುವುದಾಗಿ ಸರಕಾರಿ ಮಾಧ್ಯಮ ವರದಿ ಮಾಡಿದೆ.

ಬಾಬ್ ಎಲ್-ಮಂಡಬ್ ಮತ್ತು ಹೋರ್ಮಝ್ ಜಲಸಂಧಿಯ ಮೂಲಕ ಯುರೋಪ್, ಅಮೆರಿಕ ಮತ್ತು ಏಶ್ಯಗಳಿಗೆ ಕೋಟಿಗಟ್ಟಳೆ ಬ್ಯಾರಲ್ ತೈಲ ರವಾನೆಯಾಗುತ್ತಿದೆ. ಈ ಜಲಮಾರ್ಗಗಳು ಯಮನ್ ಮತ್ತು ಇರಾನ್ ಕರಾವಳಿಗಳ ಮೂಲಕ ಹಾದು ಹೋಗುತ್ತವೆ.

 ಸುಮಾರು 20 ಲಕ್ಷ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ನಡೆಯುವ ಯುದ್ಧಾಭ್ಯಾಸದಲ್ಲಿ ನೌಕಾ ಹಡಗುಗಳು, ಸಬ್‌ಮರೀನ್‌ಗಳು ಮತ್ತು ಹೆಲಿಕಾಪ್ಟರ್‌ಗಳು ಪಾಲ್ಗೊಳ್ಳುತ್ತವೆ ಎಂದು ಸರಕಾರಿ ಸುದ್ದಿ ಸಂಸ್ಥೆ ‘ಇರ್ನ’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News