×
Ad

ದಿಲ್ಲಿ ಮ್ಯಾರಥಾನ್: ಗೋಪಿ, ಮೋನಿಕಾ ಚಾಂಪಿಯನ್

Update: 2017-02-26 23:32 IST

ಹೊಸದಿಲ್ಲಿ, ಫೆ.26: ದ್ವಿತೀಯ ಆವೃತ್ತಿಯ ದಿಲ್ಲಿ ಮ್ಯಾರಥಾನ್‌ನಲ್ಲಿ ರಿಯೋ ಒಲಿಂಪಿಯನ್ ಟಿ. ಗೋಪಿ ಹಾಗೂ ಮೋನಿಕಾ ಅಥರೆ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ರವಿವಾರ ಐಡಿಬಿಐ ಫೆಡರಲ್ ಲೈಫ್ ಇನ್ಯೂನೆನ್ಸ್ ಪ್ರಾಯೋಜಕತ್ವದಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಗೋಪಿ 2 ಗಂಟೆ, 15 ನಿಮಿಷ, 37 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಈ ಮೂಲಕ ಮೊದಲ ಬಾರಿ ಪೂರ್ಣ ಮ್ಯಾರಥಾನ್‌ನಲ್ಲಿ ವಿಜಯಿಯಾದರು.

ಪುಣೆಯ ಆರ್ಮಿ ಸ್ಪೋರ್ಟ್ಸ್ ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವ ಗೋಪಿ ಆಗಸ್ಟ್‌ನಲ್ಲಿ ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಈಗಾಗಲೇ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ರಿಯೋ ಒಲಿಂಪಿಕ್ಸ್‌ನಲ್ಲಿ 2:15.25 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದ ಗೋಪಿ 25ನೆ ಸ್ಥಾನ ಪಡೆದಿದ್ದರು.

ಪುಣೆಯ ಆರ್ಮಿ ಸ್ಪೋರ್ಟ್ಸ್ ಸಂಸ್ಥೆಯ ಬಹಾದೂರ್ ಸಿಂಗ್ ಧೋನಿ(2:16:09) ಹಾಗೂ ಟಿಎಚ್ ಸಂಜಿತ್(2:17:20) 42.19 ಕಿ.ಮೀ.ದೂರವನ್ನು ಕ್ರಮಿಸಿ ಕ್ರಮವಾಗಿ 2ನೆ ಹಾಗೂ 3ನೆ ಸ್ಥಾನವನ್ನು ಪಡೆದರು.

ಮಹಿಳೆಯರ ಪೂರ್ಣ ಮ್ಯಾರಥಾನ್‌ನಲ್ಲಿ ನಾಸಿಕ್‌ನ ಮೋನಿಕಾ ಅಥರೆ 2:39:08 ನಿಮಿಷದಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದು ಚೊಚ್ಚಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಆರಂಭದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡ ಮೋನಿಕಾ ರೇಸ್‌ನ್ನು ಸುಲಭವಾಗಿ ಗೆದ್ದುಕೊಂಡರು. 2:45:00 ನಿಮಿಷದಲ್ಲಿ ಗುರಿ ತಲುಪಿದ್ದ ಮೋನಿಕಾ ಈಗಾಗಲೇ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ.

ಜ್ಯೋತಿ ಗವಾಟೆ(2:53:48) ಹಾಗೂ ರಂಜನ್ ಕುಮಾರಿ(3:08:04) ಕ್ರಮವಾಗಿ ಎರಡನೆ ಹಾಗೂ ಮೂರನೆ ಸ್ಥಾನ ಪಡೆದರು.

ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ಹಾಗೂ ದೂರದ ಓಟದ ದಂತಕತೆ ಇಥಿಯೋಪಿಯದ ಹೈಲಿ ಗೆಬ್ರೆಸ್‌ಲಸ್ಸಿ ಮ್ಯಾರಥಾನ್‌ಗೆ ಚಾಲನೆ ನೀಡಿದರು.

‘‘ಪ್ರಶಸ್ತಿ ಜಯಿಸಿ ತುಂಬಾ ಸಂತೋಷವಾಗಿದೆ. ಧೋನಿ ಹಾಗೂ ನಾನು ಆರಂಭದಿಂದ 25ಕೀ.ಮೀ.ತನಕ ಒಟ್ಟಿಗೆ ಇದ್ದೆವು. 2017ರಲ್ಲಿ ಇದು ನನ್ನ ಮೊದಲ ಮ್ಯಾರಥಾನ್. ಜೂನ್‌ನಲ್ಲಿ ರಾಂಚಿಯಲ್ಲಿ ಏಷ್ಯನ್ ಚಾಂಪಿಯನ್‌ಶಿಪ್ ಹಾಗೂ ಲಂಡನ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವೆ’’ಎಂದು ಗೋಪಿ ಹೇಳಿದ್ದಾರೆ.

ನಾನು ಇದೇ ಮೊದಲ ಬಾರಿ ಫುಲ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದೇನೆ. ಮ್ಯಾರಥಾನ್‌ನಲ್ಲಿ ವಿಜಯಿಯಾಗಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. 2:40ನಿಮಿಷದೊಳಗೆ ಓಟವನ್ನು ಕೊನೆಗೊಳಿಸಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಫುಲ್ ಮ್ಯಾರಥಾನ್ ಬಳಿಕ ಮೋನಿಕಾ ಹೇಳಿದರು.

ಹಾಫ್ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಜಿ. ಲಕ್ಷ್ಮಣನ್ 1:04:29 ನಿಮಿಷದಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಮಾನ್ ಸಿಂಗ್(1:04:19)) ಹಾಗೂ ಒಲಿಂಪಿಯನ್ ಖೇತ ರಾಮ್(1:06:15) ಕ್ರಮವಾಗಿ 2ನೆ ಹಾಗೂ 3ನೆ ಸ್ಥಾನ ಪಡೆದರು.

 ಮಹಿಳೆಯರ ವಿಭಾಗದಲ್ಲಿ ಮಂಜೂ ಯಾದವ್(1:21:02) ಮೊದಲ ಸ್ಥಾನ ಪಡೆದರೆ, ಅರ್ಪಿತಾ ಸೈನಿ(1:25:34) ಹಾಗೂ ನೀತು ಸಿಂಗ್(1:27:11) 2ನೆ ಹಾಗೂ 3ನೆ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News