×
Ad

ಜಗತ್ತಿನ ಗಮನ ಸೆಳೆದ ಹಿಜಾಬ್ ಧಾರಿಣಿ ರೂಪದರ್ಶಿ ಹಲೀಮಾ

Update: 2017-02-27 11:27 IST

ನ್ಯೂಯಾರ್ಕ್, ಫೆ.27: ಹಲೀಮಾ ಏಡೆನ್ ಎಂಬ ಈ ರೂಪದರ್ಶಿಯ ವಯಸ್ಸು ಕೇವಲ 19. ಸೊಮಾಲಿ-ಅಮೇರಿಕನ್ ಮೂಲದವಳಾದ ಈಕೆ ಕಳೆದ ಮೂರು ತಿಂಗಳುಗಳಿಂದ ಬಹಳಷ್ಟು ಸುದ್ದಿಯಲ್ಲಿದ್ದಾಳೆ. ಆಕೆ ಕಳೆದ ನವೆಂಬರ್ ತಿಂಗಳಲ್ಲಿ ಮಿಸ್ ಮಿನ್ನೆಸೊಟಾ ಯುಎಸ್‌ಎ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದಂದಿನಿಂದ ಆಕೆ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಏಕಂತೀರಾ? ಆಕೆ ಸೌಂದರ್ಯ ಸ್ಪರ್ಧೆಯಲ್ಲಿ ಹಿಜಾಬ್ ಧರಿಸಿಯೇ ಭಾಗವಹಿಸಿದ್ದಳಲ್ಲದೆ ಸ್ವಿಮ್ ಸೂಟ್ ಸ್ಪರ್ಧೆ ಸಂದರ್ಭದಲ್ಲೂ ತನ್ನ ದೇಹವನ್ನು ಸಂಪೂರ್ಣ ಮುಚ್ಚಿರುವ ಧಿರಿಸನ್ನೇ ಧರಿಸಿದ್ದಳು.

ಅಮೇರಿಕಾದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯೊಂದರಲ್ಲಿ ಬುರ್ಖನಿ ಧರಿಸಿ ಭಾಗವಹಿಸಿದ ಪ್ರಥಮ ಯುವತಿ ಹಲೀಮಾ ಆಗಿದ್ದಾಳೆ. ಈಕೆ ಅಮೇರಿಕಾದ ಮುಂದಿನ ಟಾಪ್ ಮಾಡೆಲ್ ಆಗಬಹುದೆಂದು ಹಲವರು ತಿಳಿದುಕೊಂಡಿದ್ದಾರಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿಯೂ ಆಕೆಗೆ ಬಹಳಷ್ಟು ಬೆಂಬಲ ದೊರಕುತ್ತಿದೆ.

ಹಲೀಮಾ ಹುಟ್ಟಿದ್ದು ಕೆನ್ಯಾದ ನಿರಾಶ್ರಿತರ ಶಿಬಿರವೊಂದರಲ್ಲಿ. ಇದೇ ಕಾರಣಕ್ಕೆ ಆಕೆ ಮುಂದೊಂದು ದಿನ ವಿಶ್ವಸಂಸ್ಥೆಯ ಗುಡ್‌ವಿಲ್ ರಾಯಭಾರಿಯಾಗಬೇಕೆಂಬ ಕನಸು ಕಾಣುತ್ತಿದ್ದಾಳೆ. ಚಿಕ್ಕವಳಿರುವಾಗಲೇ ಅವಳು ತನ್ನ ಕುಟುಂಬದೊಂದಿಗೆ ಅಮೇರಿಕಾಗೆ ವಲಸೆ ಬಂದು ಇಲ್ಲಿನ ಸೈಂಟ್ ಕ್ಲೌಡ್, ಮಿನ್ನೆಸೊಟಾದಲ್ಲಿ ವಾಸವಾಗಿದ್ದಾಳೆ. ಇಲ್ಲಿ ಸೊಮಾಲಿ-ಅಮೇರಿಕನ್ನರು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ.
ವಿಶ್ವದ ಟಾಪ್ ಮಾಡೆಲ್ಲಿಂಗ್ ಏಜನ್ಸಿಯಾಗಿರುವ ಐಎಂಜಿ ಮಾಡೆಲ್ಸ್ ಜತೆ ಒಪ್ಪಂದಕ್ಕೆ ಸಹಿ ಹಾಕಿದ ಹಾಗೂ ಸಿಆರ್ ಫ್ಯಾಶನ್ ಬುಕ್ ಇದರ ಮುಖಪುಟದಲ್ಲಿ ಕಾಣಿಸಿಕೊಂಡ ಪ್ರಥಮ ಹಿಜಾಬ್ ಧಾರಿಣಿ ರೂಪದರ್ಶಿಯೂ ಆಗಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News