ಬೆಕ್ಕಿನ ಮರಿಗಳೆಂದು ಭಾವಿಸಿ ಚಿರತೆ ಮರಿಗಳೊಂದಿಗೆ ಆಟವಾಡುತ್ತಿದ್ದ ಬಾಲಕ !
ವಿಶಾಖಪಟ್ಟಣಂ,ಫೆ.27: ಆರರ ಹರೆಯದ ಬುಡಕಟ್ಟು ಬಾಲಕನೋರ್ವ ಬೆಕ್ಕಿನ ಮರಿಗಳೆಂದು ಭಾವಿಸಿ ಚಿರತೆ ಮರಿಗಳೊಂದಿಗೆ ಎರಡು ದಿನಗಳ ಕಾಲ ಆಟವಾಡಿದ್ದಾನೆ. ಮನೆಸಮೀಪದ ಪೊದೆಗಳಲ್ಲಿದ್ದ ಈ ಮರಿಗಳನ್ನು ಆತ ಎತ್ತಿಕೊಂಡು ಮನೆಗೆ ತಂದಿದ್ದ.
ಮರಿಗಳಿಗೆ ಆಹಾರ-ಹಾಲು ನೀಡುತ್ತಿದ್ದ ಬಾಲಕ ಅವು ಎಲ್ಲೂ ಹೋಗದಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದ. ನೆರೆಕರೆಯವರು ಗಮನಿಸಿ ಎಚ್ಚರಿಕೆ ನೀಡುವವರೆಗೆ ಹೆತ್ತವರಿಗೂ ಅವು ಚಿರತೆ ಮರಿಗಳೆಂದು ಗೊತ್ತಾಗಿರಲಿಲ್ಲ. ಅಂತಿಮವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಬಾಲಕನ ಮನೆಗೆ ಬಂದು ಚಿರತೆ ಮರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು 10 ಕಿ.ಮೀ.ದೂರದ ಕಾಡಿನಲ್ಲಿ ಬಿಟ್ಟಿದ್ದಾರೆ.
ಈ ವಿಲಕ್ಷಣ ಘಟನೆ ನಡೆದಿರುವುದು ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಪದೇರು ಎಂಬಲ್ಲಿಯ ಬುಡಕಟ್ಟು ಜನರ ವಸತಿ ಪ್ರದೇಶದಲ್ಲಿ.
ತಾಯಿ ಚಿರತೆ ಸಮೀಪದಲ್ಲೆಲ್ಲಾದರೂ ಇದ್ದಿದ್ದರೆ ಬಾಲಕ ಅಪಾಯದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದ. ಸಾಮಾನ್ಯವಾಗಿ ಚಿರತೆಗಳು ಒಂದು ಬಾರಿಗೆ 2ರಿಂದ 6 ಮರಿಗಳಿಗೆ ಜನ್ಮ ನೀಡುತ್ತವೆ. 10 ದಿನಗಳ ನಂತರವಷ್ಟೇ ಕಣ್ಣು ತೆರೆಯುವ ಅವು ಸಾಕಷ್ಟು ದೊಡ್ಡದಾಗುವವರೆಗೂ ತಾಯಿಯ ಕಾಳಜಿಯಲ್ಲಿಯೇ ಇರುತ್ತವೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.