×
Ad

ಟ್ರಂಪ್ ನಿಲುವು ವಿರೋಧಿಸಿ ಆಸ್ಕರ್ ಸಮಾರಂಭ ಬಹಿಷ್ಕರಿಸಿದ ಇರಾನಿನ ಪ್ರಶಸ್ತಿ ವಿಜೇತ ನಿರ್ದೇಶಕ ಫರ್ಹಾದಿ

Update: 2017-02-27 16:28 IST

ಲಾಸ್ ಏಂಜಲೀಸ್,ಫೆ.27: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳನ್ನು ಇಲ್ಲಿ ಘೋಷಿಸಲಾಗಿದ್ದು, ಇರಾನಿನ ‘ದಿ ಸೇಲ್ಸ್‌ಮನ್ ’ ಅತ್ಯುತ್ತಮ ವಿದೇಶಿ ಚಿತ್ರ ಎಂಬ ಗೌರವಕ್ಕೆ ಪಾತ್ರವಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರದ ನಿರ್ದೇಶಕ ಅಸ್ಘರ್ ಫರ್ಹಾದಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

‘ದಿ ಸೇಲ್ಸ್‌ಮನ್ ’ ಚಿತ್ರಕ್ಕಾಗಿ ತನ್ನ ಎರಡನೇ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಫರ್ಹಾದಿ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲು ಹಾಜರಿರಲಿಲ್ಲ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏಳು ಮುಸ್ಲಿಮ್ ರಾಷ್ಟ್ರಗಳ ಪ್ರಜೆಗಳಿಗೆ ಪ್ರವೇಶ ನಿಷೇಧಿಸಿರುವ ಹಿನ್ನೆಲೆಯಲ್ಲಿ ಫರ್ಹಾದಿ ಮತ್ತು ಅವರ ಚಿತ್ರತಂಡದ ಇತರ ಸದಸ್ಯರು ಪ್ರಶಸ್ತಿ ಪ್ರದಾ ಸಮಾರಂಭವನ್ನು ಬಹಿಷ್ಕರಿಸಿದ್ದರು.

ಇರಾನಿಯನ್-ಅಮೆರಿಕನ್ ಇಂಜಿನಿಯರ್ ಅನೌಷೆಹ್ ಅನ್ಸಾರಿ ಅವರು ‘‘ಎರಡನೇ ಬಾರಿಗೆ ಈ ಅಮೂಲ್ಯ ಪ್ರಶಸ್ತಿಯನ್ನು ಪಡೆಯುತ್ತಿರುವುದು ಮಹಾನ್ ಗೌರವವಾಗಿದೆ’’ ಎಂಬ ಫರ್ಹಾದಿ ಅವರ ಹೇಳಿಕೆಯನ್ನು ಸಮಾರಂಭದ ವೇದಿಕೆಯಲ್ಲಿ ಓದಿ ಹೇಳಿದರು.

 ‘‘ನನ್ನನ್ನು ಕ್ಷಮಿಸಿ...ಇಂದು ರಾತ್ರಿ ನಾನು ನಿಮ್ಮೊಂದಿಗಿಲ್ಲ. ನನ್ನ ಗೈರುಹಾಜರಿಯು ಅಮೆರಿಕಕ್ಕೆ ವಲಸಿಗರ ಪ್ರವೇಶವನ್ನು ನಿಷೇಧಿಸಿರುವ ಅಮಾನವೀಯ ಕಾನೂನಿನಿಂದ ಅಗೌರವಕ್ಕೊಳಗಾಗಿರುವ ನನ್ನ ದೇಶದ ಮತ್ತು ಇತರ ಆರು ದೇಶಗಳ ಜನರಿಗೆ ಗೌರವದ ದ್ಯೋತಕವಾಗಿದೆ ಎಂದು ಫರ್ಹಾದಿ ತನ್ನ ಸಂದೇಶದಲ್ಲಿ ಹೇಳಿದ್ದಾರೆ.

ವಿಶ್ವವನ್ನು ‘ನಾವು’ ಮತ್ತು ‘ನಮ್ಮ ಶತ್ರುಗಳು ’ಎಂಬ ವರ್ಗಗಳನ್ನಾಗಿ ವಿಭಜಿಸುವುದು ಭೀತಿಯನ್ನು ಸೃಷ್ಟಿಸುತ್ತದೆ ಎಂದಿರುವ ಹೇಳಿಕೆಯು, ಆಕ್ರಮಣ ಮತ್ತು ಯುದ್ಧ ಇವೆರಡೂ ಕಪಟ ಸಮರ್ಥನೆಯಾಗಿವೆ. ಈ ಯುದ್ಧಗಳು ಖುದ್ದು ಆಕ್ರಮಣದ ಬಲಿಪಶುಗಳಾಗಿರುವ ದೇಶಗಳಲ್ಲಿ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳಿಗೆ ತಡೆಯನ್ನೊಡ್ಡುತ್ತವೆ ಎಂದು ಅವರ ಹೇಳಿಕೆಯು ಬೆಟ್ಟು ಮಾಡಿದೆ.

ಅಮೆರಿಕದಲ್ಲಿ ಅಮೆಝಾನ್ ಸ್ಟುಡಿಯೋಸ್ ‘ದಿ ಸೇಲ್ಸ್‌ಮನ್ ’ ಚಿತ್ರದ ವಿತರಕನಾಗಿದೆ. ಆರ್ಥರ್ ಮಿಲ್ಲರ್‌ನ ‘ಡೆತ್ ಆಫ್ ಸೇಲ್ಸ್‌ಮನ್ ’ನ ರಿಹರ್ಸಲ್ ನಡೆಸುವ ದಂಪತಿ ಪಟ್ಟ ಪಾಡುಗಳನ್ನು ಈ ಚಿತ್ರವು ಚಿತ್ರಿಸಿದೆ.

ಚಿತ್ರದ ತಾರಾಗಣದ ಪೈಕಿ ತರನೆಹ್ ಅಲಿದೂಸ್ತಿ ಅವರು ಟ್ರಂಪ್ ಅವರ ಮುಸ್ಲಿಮ್ ನಿಷೇಧದ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಹಿಷ್ಕರಿಸಿದ ಮೊದಲಿಗರಾಗಿದ್ದಾರೆ.

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕೆಲವೇ ಗಂಟೆಗಳು ಬಾಕಿಯಿರುವಾಗ ಟ್ರಂಪ್ ಅವರ ಪ್ರವಾಸ ನಿಷೇಧದ ವಿರುದ್ಧ ಏಕತೆ ಮತ್ತು ಬಲವನ್ನು ತೋರಿಸಲು ರವಿವಾರ ಲಂಡನ್‌ನಲ್ಲಿ ‘ದಿ ಸೇಲ್ಸ್‌ಮನ್ ’ ಚಿತ್ರದ ವಿಶೇಷ ಪ್ರದರ್ಶನವನ್ನು ಹಮ್ಮಿಕೊಳ್ಳ ಲಾಗಿತ್ತು. ಲಂಡನ್ ಮೇಯರ್‌ ಸಾದಿಕ್ ಖಾನ್ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟಿ ಹಾಗೂ ಮಾಡೆಲ್ ಲಿಲಿ ಕೋಲ್,ನಿರ್ಮಾಪಕರಾದ ಕೇಟ್ ವಿಲ್ಸನ್ ಮತ್ತು ನಿರ್ದೇಶಕ ಮಾರ್ಕ್ ಡನ್ನೆ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News