ವಡೋದರಾ:ಎಟಿಎಂ ಹೊರಗೆ 24.68 ಲ.ರೂ.ಗಳಿದ್ದ ಪೆಟ್ಟಿಗೆ ಪತ್ತೆ
Update: 2017-02-27 21:06 IST
ವಡೋದರಾ,ಫೆ.27: ಇಲ್ಲಿಯ ಪ್ರಮುಖ ರಾಷ್ಟ್ರೀಕೃತ ಬ್ಯಾಂಕೊಂದರ ಎಟಿಎಂ ಹೊರಗಡೆ 24.68 ಲ.ರೂ.ಗಳಿದ್ದ ಪೆಟ್ಟಿಗೆಯೊಂದು ಪತ್ತೆಯಾಗಿದ್ದು, ಈ ಪ್ರಕರಣ ಪೊಲೀಸರನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು.
ಎಟಿಎಂಗೆ ಹಣವನ್ನು ತುಂಬುವ ಏಜೆನ್ಸಿಯ ಸಿಬ್ಬಂದಿ ಈ ಪೆಟ್ಟಿಗೆಯನ್ನು ಅಲ್ಲಿ ಮರೆತು ಹೋಗಿದ್ದ ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಶನಿವಾರ ತಡರಾತ್ರಿ ಇಲ್ಲಿಯ ವಘೋಡಿಯಾ ರಸ್ತೆಯಲ್ಲಿರುವ ಎಟಿಎಂನಿಂದ ಹಣವನ್ನು ಹಿಂಪಡೆಯಲೆಂದು ತೆರಳಿದ್ದ ಕಾಲೇಜು ವಿದ್ಯಾರ್ಥಿಯೋರ್ವ ಕುತೂಹಲ ದಿಂದ ಪೆಟ್ಟಿಗೆಯನ್ನು ತೆರೆದು ನೋಡಿದಾಗ 2,000 ಮತ್ತು 500 ರೂ.ನೋಟುಗಳ ಕಟ್ಟುಗಳನ್ನು ಕಂಡು ಅಚ್ಚರಿಗೊಂಡಿದ್ದ. ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿಯನ್ನು ನೀಡಿದ್ದ.
ಹಣ ತುಂಬುವ ಸಿಬ್ಬಂದಿ ಫೆ.23ರಂದು ಈ ಎಟಿಎಂಗೆ ಹಣ ತುಂಬಿದ್ದು, ಆಗಿನಿಂದಲೂ ಪೆಟ್ಟಿಗೆ ಎಟಿಎಂ ಹೊರಗೇ ಬಿದ್ದುಕೊಂಡಿತ್ತು ಎಂದು ಎಸಿಪಿ ವೈ.ಆರ್.ಗಾಮಿತ್ ತಿಳಿಸಿದರು.