×
Ad

ಉಗ್ರವಾದಕ್ಕೆ ಅಫ್‌ಸ್ಪಾ ಮದ್ದಲ್ಲ,ಅದು ರೋಗವನ್ನು ಹೆಚ್ಚಿಸಿದೆ: ಪಿಆರ್‌ಜೆಎ

Update: 2017-02-27 21:19 IST

ಹೊಸದಿಲ್ಲಿ,,ಫೆ.27: ಸಶಸ್ತ್ರ ಪಡೆಗಳ (ವಿಶೇಷಾಧಿಕಾರಗಳು) ಕಾಯ್ದೆಯು ಉಗ್ರವಾದಕ್ಕೆ ಪರಿಹಾರವಲ್ಲ ಮತ್ತು ಮಣಿಪುರದ ಸಂಪನ್ಮೂಲಗಳ ಸುಲಿಗೆಗಾಗಿ ಈ ಕಾಯ್ದೆ ಜಾರಿಯಲ್ಲಿದೆ ಎಂದು ಇರೋಂ ಶರ್ಮಿಳಾ ಅವರ ಪಕ್ಷ ಪೀಪಲ್ಸ್ ರಿಸರ್ಜನ್ಸ್ ಆ್ಯಂಡ್ ಜಸ್ಟೀಸ್ ಅಲಾಯನ್ಸ್(ಪಿಆರ್‌ಜೆಎ) ಹೇಳಿದೆ.

  1980ರ ದಶಕದಲ್ಲಿ ಮಣಿಪುರದಲ್ಲಿ ಕರಾಳ ಅಫ್‌ಸ್ಪಾ ಜಾರಿಗೊಂಡಿದ್ದಾಗ ಕೇವಲ ನಾಲ್ಕು ಬಂಡುಕೋರ ಗುಂಪುಗಳಿದ್ದವು. ಅಲ್ಲಿಂದೀಚೆಗೆ ಅವುಗಳ ಸಂಖ್ಯೆ 32 ನ್ನು ಮೀರಿದೆ. ಉಗ್ರವಾದಕ್ಕೆ ಅಫ್‌ಸ್ಪಾ ಮದ್ದಲ್ಲ, ವಾಸ್ತವದಲ್ಲಿ ಅದು ಈ ಪಿಡುಗನ್ನು ಹೆಚ್ಚಿಸಿದೆ. ಉಗ್ರವಾದ ಮತ್ತು ಬಂಡಾಯವನ್ನು ಎದುರಿಸಲು ಕಾನೂನುಗಳು ಮತ್ತು ಕಾರ್ಯಕ್ರಮಗಳು ಅಗತ್ಯವಾಗಿರಬಹುದು, ಆದರೆ ಅಫ್‌ಸ್ಪಾ ಅವುಗಳ ಪೈಕಿ ಒಂದಲ್ಲ ಎಂದು ಪಕ್ಷದ ಸಂಚಾಲಕ ಎರೆಂಡ್ರೊ ಲೀಕೊಮ್‌ಬಾಮ್ ಅವರು ಸುದ್ದಿಸಂಸ್ಥೆಗೆ ಇ-ಮೇಲ್ ಸಂದೇಶದಲ್ಲಿ ತಿಳಿಸಿದ್ದಾರೆ.

 ಶರ್ಮಿಳಾ ಅಫ್‌ಸ್ಪಾ ವಿರುದ್ಧ ತನ್ನ 16 ವರ್ಷಗಳ ಉಪವಾಸ ಸತ್ಯಾಗ್ರಹವನ್ನು ಕಳೆದ ವರ್ಷದ ಆಗಸ್ಟ್‌ನಲ್ಲಿ ಅಂತ್ಯಗೊಳಿಸಿದ ಬಳಿಕ ಪಿಆರ್‌ಜೆಎ ಸ್ಥಾಪಿಸಿದ್ದಾರೆ. ಇದೇ ಮೊದಲ ಬಾರಿಗೆ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅದು ಒಟ್ಟು 60 ಸ್ಥಾನಗಳ ಪೈಕಿ ಮೂರರಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ತನ್ನ ಪಕ್ಷವು ಅಫ್‌ಸ್ಪಾ ರದ್ದತಿ ಜೊತೆಗೆ ಭ್ರಷ್ಟಾಚಾರದ ಅಂತ್ಯ, ನಿರುದ್ಯೋಗ ನಿವಾರಣೆ, ಲೋಕಾಯುಕ್ತ ಜಾರಿ ಇತ್ಯಾದಿಗಳಿಗಾಗಿ ಶ್ರಮಿಸಲಿದೆ ಎಂದು ಲೀಕೊಮ್‌ಬಾಮ್ ಹೇಳಿದರು.

ಮಣಿಪುರದಲ್ಲಿ ಮಾ.4 ಮತ್ತು ಮಾ.8ರಂದು ಮತದಾನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News