ಕಪ್ಪುಹಣ ಬಿಳುಪುಗೊಳಿಸಿದ ಪ್ರಕರಣ : ಝಾಕಿರ್ ನಾಯ್ಕ್ ಗೆ ಮತ್ತೆ ಇ.ಡಿ. ಸಮನ್ಸ್

Update: 2017-02-27 16:16 GMT

ಮುಂಬೈ, ಫೆ.27: ಕಪ್ಪುಹಣ ಬಿಳುಪುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿದ್ವಾಂಸ ನಾಯ್ಕ್ ಗೆ ಜಾರಿ ನಿರ್ದೇಶನಾಲಯವು ಸೋಮವಾರ ಮತ್ತೆ ಸಮನ್ಸ್ ಜಾರಿಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಇಲಾಖೆಯು ಝಕೀರ್ ನಾಯ್ಕ್ ಗೆ ಸಮನ್ಸ್ ನೀಡಿರುವುದು ಇದು ನಾಲ್ಕನೆಯ ಸಲವಾಗಿದೆ. ಪ್ರಕರಣದ ತನಿಖೆಯಲ್ಲಿ ಸಹಕರಿಸುವಂತೆ ಸೂಚಿಸಿ, ಜಾರಿ ನಿರ್ದೇಶನಾಲಯ(ಇ.ಡಿ.)ವು ಝಾಕಿರ್‌ಗೆ ಅವರ ವಕೀಲರು ಹಾಗೂ ಇಮೇಲ್ ಮೂಲಕ ಸಮನ್ಸ್ ಕಳುಹಿಸಿದೆ.ಪ್ರಸ್ತುತ ವಿದೇಶದಲ್ಲಿರುವ ಝಾಕಿರ್ ವೀಡಿಯೊ ಕಾನ್ಫರೆನ್ಸ್ ಮೂಲಕ ತನಗೆ ವಿವರಣೆ ನೀಡಲು ಅವಕಾಶ ನೀಡಬೇಕೆಂದು ಕೋರಿದ್ದರೂ, ಜಾರಿ ನಿರ್ದೇಶನಾಲಯವು ಅದಕ್ಕೆ ನಿರಾಕರಿಸಿತ್ತು.

ಇದೀಗ ಝಾಕಿರ್ ನಾಯ್ಕ್ ಗೆ ಕಳುಹಿಸಿರುವ ಹೊಸ ಸಮನ್ಸ್ ಅವರಿಗೆ ನೀಡುವ ಕೊನೆಯ ಸಮನ್ಸ್ ಆಗಲಿದೆಯೆಂಬ ಸೂಚನೆಗಳು ಲಭ್ಯವಾಗಿವೆ. ಒಂದು ವೇಳೆ ಝಾಕಿರ್ ಇದನ್ನು ಸಹ ಕಡೆಗಣಿಸಿದಲ್ಲಿ, ಅವರ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಲು ಇಲಾಖೆಯು ನ್ಯಾಯಾಲಯದ ಮೆಟ್ಟಲೇರುವ ಸಾಧ್ಯತೆಯಿದೆಯೆನ್ನಲಾಗಿದೆ.

ಝಾಕಿರ್ ಅವರನ್ನು ಇಂಟರ್ನೆಟ್ ಆಧಾರಿತ ವೀಡಿಯೊ ಲಿಂಕ್ ಮೂಲಕ ವಿಚಾರಣೆಗೊಳಪಡಿಸಲು ಕಪ್ಪುಹಣ ಬಿಳುಪುಗೊಳಿಸುವಿಕೆ ತಡೆ ಕಾಯ್ದೆ ನಿಯಮಗಳ ಪ್ರಕಾರ ಅವಕಾಶವಿರುವುದಿಲ್ಲ ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.

    ಇದಕ್ಕಿಂತಲೂ ಮಿಗಿಲಾಗಿ ಝಾಕಿರ್ ಹಾಗೂ ಇತರರ ವಿರುದ್ಧ ಕಪ್ಪುಹಣ ಬಿಳುಪುಗೊಳಿಸಿದಂತಹ ಗಂಭೀರ ಆರೋಪಗಳಿರುವ ಹಿನ್ನೆಲೆಯಲ್ಲಿ ಅವರನ್ನು ವೈಯಕ್ತಿಕವಾಗಿ ವಿಚಾರಣೆಗೊಳಪಡಿಸಲು ಇಲಾಖೆಯು ಬಯಸಿದೆಯೆನ್ನಲಾಗಿದೆ. ಝಾಕಿರ್ ನಾಯ್ಕ್ ಅವರು ಸ್ಕೈಪೆ ಅಥವಾ ಇತರ ಯಾವುದೇ ವಿಧದ ಇಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ತನಿಖೆಗೆ ಸಹಕರಿಸಲು ಸಿದ್ಧರಿದ್ದಾರೆಂದು ಅವರ ವಕೀಲರಾದ ಮಹೇಶ್ ಮುಳೆ ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದರು.

ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (ಐಆರ್‌ಎಫ್) ಎಂಬ ಎನ್‌ಜಿಓ ಸಂಸ್ಥೆಯ ಸ್ಥಾಪಕರಾದ ಝಾಕಿರ್ ನಾಯ್ಕ್, ತಾನು ಅನಿವಾಸಿ ಭಾರತೀಯನಾಗಿದ್ದು, ಈವರೆಗೆ ಯಾವುದೇ ಸಮನ್ಸ್ ಸ್ವೀಕರಿಸಿಲ್ಲವೆಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News