ದೇಶಪ್ರೇಮ ಮಾತಿನ ಸರಕಾಗಬಾರದು: ಪ್ರೊ. ಸುರೇಂದ್ರ ರಾವ್

Update: 2017-02-27 18:43 GMT

ಮೂಡುಬಿದಿರೆ, ಫೆ.27: ರಾಷ್ಟ್ರಪ್ರೇಮವು ನಮ್ಮಲ್ಲಿ ಅಂತರ್ಗತವಾಗಿ ಬಂದಿರುವಂತಹದ್ದು. ರಾಷ್ಟ್ರ ಪ್ರೇಮದ ಬಗ್ಗೆ ಯಾರೋ ಎಲ್ಲಿಯೋ ಕುಳಿತು ಮಾತನಾಡುವಂತಾಗಬಾರದು. ಯಾವಾಗಲೂ ನಮ್ಮ ಭಾಷೆ, ಉಡುಗೆ-ತೊಡುಗೆಗಳ ಆಧಾರದಲ್ಲಿ ನಮ್ಮ ಭಾರತೀಯತೆಯನ್ನು ಗುರುತಿಸಲಾಗುತ್ತದೆ. ಈ ಮೂಲಕ ಒಬ್ಬರ ರಾಷ್ಟ್ರ ಪ್ರೇಮವನ್ನು ತೀಕ್ಷ್ಣವಾಗಿ ಪರಿಶೋಧಿಸಲಾಗುತ್ತದೆ. ಯಾರು ಏನೇ ಹೇಳಿದರೂ, ‘ಆಧಾರ್’ನಂತಹ ಮಾನ ದಂಡಗಳಿದ್ದರೂ, ಇರದಿದ್ದರೂ ನಾನು ಭಾರತೀಯ ನೆಂಬ ಪ್ರಜ್ಞೆ ನಮ್ಮಲ್ಲಿ ಜಾಗೃತವಾಗಿರಬೇಕು ಎಂದು ಪ್ರೊ. ಸುರೇಂದ್ರರಾವ್ ಹೇಳಿದರು.

ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗ ಹಾಗೂ ಮಂಗಳೂರು ವಿವಿಯ ಕನ್ನಡ ಅಧ್ಯಾಪಕರ ಸಂಘ-‘ವಿಕಾಸ’ದ ಸಹ ಯೋಗದಲ್ಲಿ ನಡೆದ ‘ವರ್ತಮಾನದ ರಾಷ್ಟ್ರ ಪ್ರಜ್ಞೆ ಮತ್ತು ಸವಾಲುಗಳು’ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಚಾರಸಂಕಿರಣದ ಸಂಪ ನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ಗೌಡ ಸ್ವಾಗತಿಸಿದರು. ಡಾ. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರ್ವಹಿಸಿದರು. ವಿಚಾರ ಸಂಕಿರಣದಲ್ಲಿ ವಿವಿಧ ಕಾಲೇಜುಗಳ ಉಪ ನ್ಯಾಸಕರು ಹಾಗೂ ವಿದ್ಯಾರ್ಥಿಗಳಿಂದ ವಿಚಾರ ಮಂಡನೆ ನಡೆಯಲಿದೆ.

**********

ಜಪಾನ್ ದೇಶದಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಅನುಭವವನ್ನು ಡಾ. ಆಳ್ವ ಹಂಚಿಕೊಂಡರು. ವಿದೇಶದಲ್ಲಿ ನೆಲೆಸುವ ಅವಕಾಶಗಳು ಸಾಕಷ್ಟು ಬಾರಿ ದಕ್ಕಿದ್ದರೂ ಅದನ್ನು ತಿರಸ್ಕರಿಸಿರುವುದಾಗಿ ತಿಳಿಸಿದ ಡಾ. ಆಳ್ವ, ‘ನನ್ನ ಆಲೋಚನೆಗಳು, ವಿಚಾರಗಳು ನನ್ನ ದೇಶದ ಪರಿಮಿತಿಯಲ್ಲೇ ಸಾಗಬೇಕು ಎಂಬುದು ನನ್ನ ಆಸೆ. ಹಾಗಾಗಿ ವಿದೇಶದತ್ತ ಮನಸ್ಸು ಕೊಟ್ಟಿಲ್ಲ’ ಎಂದರು.

 ಪ್ರಥಮ ಗೋಷ್ಠಿ ‘ಭಾಷಿಕ ಸಮುದಾಯ ಮತ್ತು ರಾಷ್ಟ್ರಪ್ರಜ್ಞೆ’ಯ ಕುರಿತು ಹೈದರಬಾದ್ ವಿಶ್ವವಿದ್ಯಾನಿಲಯದ, ಭಾಷಾಂತರ ಅಧ್ಯಯನ ವಿಭಾಗ, ಇಂಗ್ಲಿಷ್ ಮತ್ತು ವಿದೇಶಿ ಭಾಷೆಯ ಸಹಪ್ರಾಧ್ಯಾಪಕ ಡಾ. ತಾರಕೇಶ್ವರ ವಿ.ಬಿ. ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಮೌಲ್ಯಾಜೀವನ್‌ರಾಂ ಈ ಕಾರ್ಯಕ್ರಮವನ್ನು ನೆರೆವೇರಿಸಿಕೊಟ್ಟರು.

 ದ್ವಿತೀಯ ಗೋಷ್ಠಿಯಲ್ಲಿ ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಕನ್ನಡ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಬಿ.ವಿ. ವಸಂತಕುಮಾರ್ ‘ಸಮಾಜ ಮತ್ತು ರಾಷ್ಟ್ರಪ್ರಜ್ಞೆ’ ಕುರಿತು ಮಾತನಾಡಿದರು. ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ ಕೃಷ್ಣರಾಜ ಕರಬ ಕಾರ್ಯಕ್ರಮ ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News