×
Ad

ಆಮೀರ್ ಖಾನ್‌ಗೆ ಸ್ಫೂರ್ತಿಯಾದ ಇಂಜಿನಿಯರ್‌ಗೆ ರೋಲೆಕ್ಸ್ ಗೌರವ

Update: 2017-02-28 20:31 IST

ಲೇಹ್, ಫೆ.28: ಲಡಾಕ್‌ನ 50ರ ಹರೆಯದ ಇಂಜಿನಿಯರ್ ಸೋನಮ್ ವಾಂಗ್‌ಚುಕ್ ಅವರು ರೂಪಿಸಿದ ‘ಹಿಮದ ಸ್ತೂಪ’ ಯೋಜನೆ ‘ರೋಲೆಕ್ಸ್ ಎಂಟರ್‌ಪ್ರೈಸ್’ ಜಾಗತಿಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ಲಾಸ್ ಏಂಜಲಿಸ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಈ ಪ್ರತಿಷ್ಠಿತ ಪುರಸ್ಕಾರ ಪ್ರದಾನ ಮಾಡಲಾಯಿತು. ಈ ವರ್ಷ ಪುರಸ್ಕಾರಕ್ಕೆ ಆಯ್ಕೆಯಾದ ವಿಶ್ವಮಟ್ಟದ ಐದು ಯೋಜನೆಗಳಲ್ಲಿ ‘ಹಿಮದ ಸ್ತೂಪ’ ಒಂದಾಗಿದೆ.

 ಹಿಂದಿ ಸಿನೆಮಾ ನಟ ಅಮೀರ್‌ಖಾನ್ ಅವರ 2009ರ ಅತ್ಯಂತ ಯಶಸ್ವೀ ಚಿತ್ರ ಎನಿಸಿದ್ದ ‘ಥ್ರೀ ಈಡಿಯಟ್ಸ್’ ಸಿನೆಮಾದಲ್ಲಿ ಅಮೀರ್‌ಖಾನ್ ನಿರ್ವಹಿಸಿದ್ದ ಫುನ್‌ಸುಕ್ ವಾಂಗ್‌ಡು ಪಾತ್ರಕ್ಕೆ ಸೋನಮ್ ವಾಂಗ್‌ಚುಕ್ ಅವರೇ ಪ್ರೇರಣೆ ಎನ್ನಲಾಗಿದೆ.

 ರೋಲೆಕ್ಸ್ ಸಂಸ್ಥೆಯ ಹುಟ್ಟಿಗೆ ಕಾರಣವಾದ ಕಲ್ಪನಾಶಕ್ತಿಯ ಸ್ಫೂರ್ತಿಗೆ ಸಮವಾದ ಉದ್ಯಮಶೀಲತಾ ಮನೋಭಾವನೆಯನ್ನು ಬೆಂಬಲಿಸುವ ಉದ್ಧೇಶದಿಂದ ರೋಲೆಕ್ಸ್ ಪುರಸ್ಕಾರವನ್ನು ಆರಂಭಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ರೆಬೆಕ್ಕಾ ಇರ್ವಿನ್ ತಿಳಿಸಿದ್ದಾರೆ.

  ಹಿಮಾಲಯದ ಪಶ್ಚಿಮ ತಪ್ಪಲಿನ ಪ್ರದೇಶಗಳಲ್ಲಿ ಇರುವ ಬರದ ಸಮಸ್ಯೆಯನ್ನು ಹಿಮ ಸ್ತೂಪದ ನೆರವಿನಿಂದ ಹೇಗೆ ನಿವಾರಿಸಬಹುದು ಎಂದು ವಾಂಗ್‌ಚುಕ್ ಈ ಯೋಜನೆಯ ಮೂಲಕ ಪ್ರಸ್ತುತಪಡಿಸಿದ್ದರು. ಲಡಾಕ್‌ನ ಸಹ ಇಂಜಿನಿಯರ್ ಚೆವಾಂಗ್ ನಾರ್ಫೆಲ್ ಅವರಿಂದ ಸ್ಫೂರ್ತಿ ಪಡೆದು ಈ ಯೋಜನೆ ರೂಪಿಸಿದ್ದರು ವಾಂಗ್‌ಚುಕ್. ಹಿಮವನ್ನು ಸ್ತೂಪದ ರೀತಿಯಲ್ಲಿ ಕಾದಿರಿಸಿಕೊಂಡು ಬರಗಾಲ ಪೀಡಿತ ಪ್ರದೇಶದಲ್ಲಿ ಬೆಳೆಗಳಿಗೆ ನೀರುಣಿಸಲು ಬಳಸಬಹುದು ಎಂಬುದು ಈ ಯೋಜನೆಯ ಸಾರಾಂಶವಾಗಿದೆ. ಸುಮಾರು 30 ಮೀಟರ್ ಎತ್ತರದ ಸುಮಾರು 20 ಹಿಮಸ್ತೂಪ ನಿರ್ಮಿಸಿ ಮಿಲಿಯನ್‌ಗಟ್ಟಲೆ ಲೀಟರ್ ನೀರನ್ನು ಬೆಳೆಗಳಿಗೆ ಪೂರೈಸುವುದು ವಾಂಗ್‌ಚುಕ್ ಯೋಜನೆಯಾಗಿದೆ.

ಪ್ರಸ್ತುತ ವಾಂಗ್‌ಚುಕ್ ತಮಗೆ ಗ್ರಾಮಸ್ಥರು ಕೊಡುಗೆಯಾಗಿ ನೀಡಿದ 65 ಹೆಕ್ಟೇರ್ ಪ್ರದೇಶದಲ್ಲಿ ಒಂದು ಪರ್ಯಾಯ ವಿಶ್ವವಿದ್ಯಾನಿಲಯ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಈ ವಿವಿಯಲ್ಲಿ ಲಡಾಕ್, ಹಿಮಾಲಯ ಮತ್ತಿತರ ಪರ್ವತಪ್ರದೇಶಗಳ ಯುವಜನತೆಗೆ - ನಿಮ್ಮ ಬದುಕಿನ ಸವಾಲಿಗೆ ನೀವೇ ಪರಿಹಾರ ಕಂಡುಕೊಳ್ಳಿ - ಎಂಬ ಪರಿಕಲ್ಪನೆಯ ಶಿಕ್ಷಣ ನೀಡುವ ಉದ್ದೇಶವನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News