ಮುದರಂಗಡಿ, ಮಸೀದಿ,ಕಲ್ಲೆಸೆತ, ಖಂಡನೀಯ,

Update: 2017-02-28 18:44 GMT

ಪಡುಬಿದ್ರೆ, ಫೆ.28: ಕ್ಷುಲ್ಲಕ ವಿಚಾರದ ಘಟನೆಯನ್ನು ಮತೀಯ ಗಲಭೆೆಗೆ ಪ್ರೇರಣೆ ನೀಡಿ ಊರಿನ ಶಾಂತಿ ಕದಡುವ ಸಲುವಾಗಿ ಮಸೀದಿ, ಮದ್ರಸಗಳಿಗೆ ಕಲ್ಲು ಹೊಡೆಯುವ ನೀಚ ಕೃತ್ಯ ಖಂಡನೀಯ. ಇಂತಹ ಕೆಲಸಕ್ಕೆ ಸಂಘಪರಿವಾರ ಕಾರ್ಯಕರ್ತರು ಮುಂದಾಗಬಾರದು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಮುಖಂಡ ಎಂ.ಪಿ.ಮೊಯ್ದಿನಬ್ಬ ವಿನಂತಿಸಿದ್ದಾರೆ.

ಮುದರಂಗಡಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರೆಯಲ್ಲಿ ಗಲಭೆ ಉಂಟಾಗಿ ಮುದರಂಗಡಿ ಮಸೀದಿಗೆ ಹಾನಿಯಾದ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಸಂಜೆ ಮುದರಂಗಡಿ ಸುನ್ನಿ ಜಾಮಿಯಾ ಮಸೀದಿ ಆವರಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡುಬಿದ್ರೆ ಠಾಣಾ ವ್ಯಾಪ್ತಿಯಲ್ಲಿ ಮುಸ್ಲಿಮರು ಮತ್ತು ಹಿಂದೂಗಳ ಹೃದಯ ಜೋಡಿಸಲು ಎಲ್ಲಾ ವರ್ಗದ, ಪಕ್ಷದ ಮುಖಂಡರು ಮುಂದಾಗಬೇಕು ಎಂದು ಕರೆ ನೀಡಿದರು.

ಉಡುಪಿ ಜಿಲ್ಲೆ ಹಿಂದಿನಿಂದಲೂ ಶಾಂತಿಯ ಕೇಂದ್ರವಾಗಿತ್ತು. ಪೇಜಾವರ ಶ್ರೀಗಳ ಸೇವೆ, ಅದಮಾರು ಮಠದವರ ಸೇವೆ, ಹಾಜಿ ಅಬ್ದುಲ್ಲಾರ ಸೇವೆ, ಮದರ್ ಆಫ್ ಸಾರೊಸ್ ಚರ್ಚ್‌ನವರ ಸೇವೆ ನೀಡಿದ ಜಿಲ್ಲೆಯಾಗಿದೆ. ಆದರೆ ಯಾವುದೋ ಘಟನೆಯ ಬಗ್ಗೆ ಕೋಮು ಗಲಭೆಗೆ ಪ್ರಚೋದನೆ ನೀಡುವ ಶಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕು. ಯಾವುದೋ ರಸ್ತೆ ಅಪಘಾತದಿಂದ ಆಗುವ ಹೊಡೆದಾಟಗಳಿಗೆ ಸಂಬಂಧಪಟ್ಟು ಮಸೀದಿಗಳನ್ನು ಬಲಿ ಕೊಡುವ ಕೃತ್ಯಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಜಯಂತ್ ಭಟ್‌ನನ್ನು ಬಂಧಿಸಿ: ಎಲ್ಲೂರು ಗ್ರಾಪಂನ ಉಪಾಧ್ಯಕ್ಷ ಜಯಂತ್ ಭಟ್ ಎಂಬವರು ಎಲ್ಲೂರು ಮುದರಂಗಡಿ ಭಾಗದಲ್ಲಿ ಕೆಲವೊಂದು ಘಟನೆಗಳಿಗೆ ಕಾರಣರಾಗುತ್ತಿದ್ದಾರೆ. ಇತ್ತೀಚೆಗೆ ರಾತ್ರಿ ಸಮಯದಲ್ಲಿ ನದೀಂ ಎಂಬಾತನ ಮನೆಗೆ ತೆರಳಿ ನಿಮ್ಮ ಮೇಲೆ ಕೇಸು ಇದೆ, ಊರು ಬಿಟ್ಟು ಹೋಗಿ ಎಂದು ತಂದೆ, ತಾಯಿಗೆ ಬೆದರಿಕೆ ಒಡ್ಡಿರುವುದಲ್ಲದೆ, ಮುನಾಫ್ ಎಂಬಾತನ ಮನೆಗೆ ಹೋಗಿ ಕೇಸು ವಾಪಸ್ ಪಡೆಯಬೇಕೆಂದು ಬೆದರಿಕೆ ಒಡ್ಡಿದ್ದಾರೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಜಯಂತ್ ಭಟ್ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ತಕ್ಷಣ ಜಾಮೀನು ರಹಿತ ಮೊಕದ್ದಮೆ ದಾಖಲಿಸಿಕೊಂಡು ಬಂಧಿಸಿ ಜೈಲಿಗೆ ಅಟ್ಟಬೇಕು. ಇಲ್ಲದಿದ್ದಲ್ಲಿ ಮುಸಲ್ಮಾನರು ಕೈಕಟ್ಟಿ ಕೂರುವುದಿಲ್ಲ. ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿಯವರೂ ಕ್ರಮ ಕೈಗೊಳ್ಳಬೇಕು ಎಂದು ಅವರು ವಿನಂತಿಸಿದ್ದಾರೆ.

 ಡಿಸಿಗೆ ಮನವಿ: ಮುದರಂಗಡಿ, ಪಡುಬಿದ್ರೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ಜಿಲ್ಲಾಧಿಕಾರಿಯವರಿಗೆ ಬುಧವಾರ ಮಧ್ಯಾಹ್ನ 3:30ಕ್ಕೆ ಎಲ್ಲಾ ಮಸೀದಿ, ಮದ್ರಸ, ಮುಸ್ಲಿಮ್‌ಸಂಘಟನೆಯ ವತಿಯಿಂದ ಈ ಪ್ರಕರಣದ ಕುರಿತಾಗಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದರು. ಉಡುಪಿ ಜಿಲ್ಲಾ ವಕ್ಫ್ ಮಂಡಳಿಯ ಅಧ್ಯಕ್ಷ ನಕ್ವಾ ಯಹ್ಯಾ, ವಕ್ಫ್ ಮಂಡಳಿ ಮಾಜಿ ಉಪಾಧ್ಯಕ್ಷ ಗುಲಾಂ ಮುಹಮ್ಮದ್, ಮುದರಂಗಡಿ ಮಸೀದಿಯ ಅಧ್ಯಕ್ಷ ಶೇಖ್ ಮನ್ನಾ ಸಾಹೇಬ್, ಹಮ್ಮಬ್ಬ ಮೊಯ್ದೀನ್, ಮಸೀದಿ ಕೋಶಾಧಿಕಾರಿ ರಿಯಾಝ್, ನಝೀರ್ ಸಾಹೇಬ್, ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ಅಝೀಝ್, ಎಸ್‌ಡಿಪಿಐಯ ಹನೀಫ್ ಮೂಳೂರು, ಶಬ್ಬೀರ್ ಹುಸೈನ್ ಸಾಹೇಬ್, ಪಡುಬಿದ್ರೆ ಜಮಾಅತ್ ಅಧ್ಯಕ್ಷ ಹಾಜಿ ಅಬ್ದುರ್ರಹ್ಮಾನ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News