ಆಸ್ಪತ್ರೆ ಸಿಬ್ಬಂದಿಯ ಪ್ರಮಾದದಿಂದ ನವಜಾತ ಶಿಶುಗಳ ಅದಲು ಬದಲು

Update: 2017-03-01 10:44 GMT

ಕೊಲ್ಲಂ,ಮಾ.1: ಆಸ್ಪತ್ರೆಯಲ್ಲಿ ಪ್ರಮಾದವಶಾತ್ ಅದಲುಬದಲಾದ ನವಜಾತ ಶಿಶುಗಳ ಡಿಎನ್‌ಎ ಪರೀಕ್ಷೆ ನಡೆಸುವಮೂಲಕ ನೈಜ ತಂದೆತಾಯಂದಿರನ್ನು ಗುರುತಿಸಲಾಗಿದೆ. ಆರು ತಿಂಗಳ ಸುದೀರ್ಘ ಪರಿಶ್ರಮದ ಬಳಿಕ ಜಿಲ್ಲಾ ಶಿಶುಕಲ್ಯಾಣ ಸಮಿತಿ ಆಯಾ ಶಿಶುಗಳನ್ನು ಅವುಗಳ ನೈಜ ತಂದೆತಾಯಂದಿರ ವಶಕ್ಕೆ ಒಪ್ಪಿಸಿದೆ.

ಕೊಲ್ಲಂ ಮಯ್ಯನಾಡ್ ಅಕ್ಕೊಲಿಲ್‌ಚೇರಿ ಮುಳಯಕ್ಕವಿಳ ಅನೀಷ್-ರಂಸಿ ದಂಪತಿಯ ಮಗ ಮತ್ತು ಉಮಯನಲ್ಲೂರ್ ನೌಷಾದ್-ಜಸೀರಾ ದಂಪತಿಯ ಮಗು ಪರಸ್ಪರ ಅದಲು ಬದಲಾಗಿತ್ತು.

ಕಳೆದವರ್ಷ ಆಗಸ್ಟ್ 22 ರಂದು ಕೊಲ್ಲಂ ಮೆಡಿಸಿಟಿ ವೈದ್ಯಕೀಯ ಕಾಲೇಜಿನಲ್ಲಿ ರಂಸಿ ಮತ್ತು ಜಸೀರಾ ಹೆತ್ತಿದ್ದರು. ಇಬ್ಬರಿಗೂ ಒಂದೇ ಸಮಯದಲ್ಲಿ ಹೆರಿಗೆಯಾಗಿತ್ತು. ನಾವು ದಾದಿಯರಿಗೆ ನೀಡಿದ ಟವೆಲ್ ಹಸಿರು ಟವೆಲಾಗಿತ್ತು. ಆದರೆ ಮಗುವಿಗೆ ಹಳದಿ ಟವೆಲ್ ಹೊದ್ದು ಕೊಡಲಾಗಿದೆ ಎಂದು ರಂಸಿಯ ತಾಯಿ ಝುಬೇದಾ ಹೇಳಿದ್ದರು.

ಇದೇವೇಳೆ ಜಸೀರಾಗೆ ಹಸಿರು ಟವೆಲ್‌ನಲ್ಲಿ ಹೊದ್ದ ಮಗುವನ್ನು ನೀಡಲಾಗಿತ್ತು. ಮಗುವಿನ ಕೈಯ ಟಾಗ್‌ನಲ್ಲಿ ರಂಸಿ ಎಂದು ಬರೆಯಲಾಗಿತ್ತು. ಈ ಬಗ್ಗೆ ವಿಚಾರಿಸಿದಾಗ ಟವೆಲ್ ಬದಲಾಗಿದೆ ಎಂದು ಆಸ್ಪತ್ರೆಯವರು ಹೇಳಿದ್ದರು. ಮಗುವೆ ಬದಲಾಗಿರಬಹುದು ಎಂದು ಹೇಳಿದಾಗ ವೈದ್ಯರು ಬೈದಿದ್ದರು ಎಂದು ಝುಬೈದಾ ಹೇಳುತ್ತಾರೆ.

26ಕ್ಕೆ ರಂಸಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.ಡಿಸ್ಚಾರ್ಜ್ ದಾಖಲೆಗಳಲ್ಲಿ ಮಗುವಿನ ರಕ್ತದ ಗುಂಪು ಒ ಪಾಸಿಟಿವ್ ಎಂದು ಬರೆಯಲಾಗಿತ್ತು. ಇನ್ನೊಂದು ಆಸ್ಪತ್ರೆಯಲ್ಲಿ ಇಂಜಕ್ಷನ್‌ಗೆ ಹೋದಾಗ ರಕ್ತಪರೀಕ್ಷೆಯಲ್ಲಿ ಮಗುವಿನ ರಕ್ತದ ಗುಂಪು ಎ ಪಾಸಿಟಿವ್ ಎಂದು ಕಂಡು ಬಂದಿತ್ತು. ನಂತರ ಹಲವು ಬಾರಿ ಆಸ್ಪತ್ರೆಯ ಅಧಿಕಾರಿಗಳನ್ನು ಭೇಟಿಯಾದರೂ ಅವರು ಸಮಸ್ಯೆ ಬಗೆಹರಿಸಿಕೊಡುವ ಬದಲು ಕೆಟ್ಟದಾಗಿ ವರ್ತಿಸಿದ್ದರು. ನಂತರ ಕೊಲ್ಲಂ ಶಿಶು ಕಲ್ಯಾಣ ಸಮಿತಿಗೆ ದೂರು ನೀಡಲಾಗಿತ್ತು.

ಆಸ್ಪತ್ರೆಯ ಅಧಿಕಾರಿಗಳನ್ನು ಕರೆಸಿ ಎರಡು ಮಕ್ಕಳ ತಂದೆ ತಾಯಿಯರ ಡಿಎನ್‌ಎ ಪರೀಕ್ಷೆ ನಡೆಸಿ ಸಂಶಯ ನಿವಾರಿಸಲಾಗಿದೆ. ಡಿಎನ್‌ಎಯಲ್ಲಿ ರಂಸಿ ಮತ್ತು ಜಸೀರಾರ ಕೈವಶ ಇರುವ ಶಿಶುಗಳು ಅದಲು ಬದಲಾಗಿದ್ದು ಪರೀಕ್ಷೆಯಲ್ಲಿ ಸ್ಪಷ್ಟವಾಗಿತ್ತು.

ನಂತರ ಎರಡು ದಂಪತಿಗಳ ಸಮ್ಮತಿಯಂತೆ ಶಿಶು ಕಲ್ಯಾಣ ಸಮಿತಿಯ ನೇತೃತ್ವದಲ್ಲಿ ಆಯಾಯ ದಂಪತಿಗಳ ಮಕ್ಕಳನ್ನು ಆಯಾಯ ದಂಪತಿಗಳಿಗೆ ಒಪ್ಪಿಸಲಾಗಿದೆ.

ಆಸ್ಪತ್ರೆಯವರಿಂದಾದ ಪ್ರಮಾದ ಇದೆಂದು ಸಮಿತಿ ಹೇಳಿದ್ದು, ಈ ಕುರಿತು ತನಿಖೆ ನಡೆಸಬೇಕೆಂದು ಮಕ್ಕಳ ಹಕ್ಕು ಆಯೋಗವನ್ನು ಅದು ಆಗ್ರಹಿಸಿದೆ. ಆಸ್ಪತ್ರೆಯ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಅನೀಷ್-ರಂಸಿ ದಂಪತಿ ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News