ಭಾರತೀಯ ಎಂಜಿನಿಯರ್ ಹತ್ಯೆಗೆ ಟ್ರಂಪ್ ಖಂಡನೆ
ವಾಶಿಂಗ್ಟನ್, ಮಾ. 1: ಅಮೆರಿಕದ ಕ್ಯಾನ್ಸಸ್‌ನಲ್ಲಿ ನಡೆದ ಭಾರತೀಯ ಇಂಜಿನಿಯರ್ ಶ್ರೀನಿವಾಸ್ ಕುಚಿಭೋಟ್ಲ ಹತ್ಯೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿದ್ದಾರೆ ಹಾಗೂ ಎಲ್ಲಾ ವಿಧದ ‘ದ್ವೇಷ ಮತ್ತು ಕೆಡುಕು’ಗಳನ್ನು ಅಮೆರಿಕ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಮಂಗಳವಾರ ರಾತ್ರಿ ಅಮೆರಿಕದ ಸಂಸತ್ತು ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಪ್ರಥಮ ಭಾಷಣ ಮಾಡಿದ ವೇಳೆ ಟ್ರಂಪ್ ಈ ಘಟನೆಯನ್ನು ಪ್ರಸ್ತಾಪಿಸಿದರು.
‘‘ಇತ್ತೀಚೆಗೆ ಯಹೂದಿ ಸಮುದಾಯ ಕೇಂದ್ರಗಳು ಎದುರಿಸಿದ ಬೆದರಿಕೆಗಳು ಮತ್ತು ಯಹೂದಿ ಸ್ಮಶಾನಗಳಲ್ಲಿ ನಡೆದ ದಾಂಧಲೆಗಳು ಹಾಗೂ ಕಳೆದ ವಾರ ಕ್ಯಾನ್ಸಸ್ ನಗರದಲ್ಲಿ ನಡೆದ ಹತ್ಯೆಗಳು ದುರದೃಷ್ಟಕರವಾಗಿವೆ. ನಾವು ಧೋರಣೆಗಳಲ್ಲಿ ವಿಭಜಿತ ದೇಶವಾಗಿರಬಹುದು, ಆದರೆ ಯಾವುದೇ ರೀತಿಯ ದ್ವೇಷ ಮತ್ತು ಕೆಡುಕುಗಳನ್ನು ಖಂಡಿಸುವಲ್ಲಿ ನಾವು ಒಗ್ಟಟ್ಟಿನಿಂದಿದ್ದೇವೆ’’ ಎಂದು ಟ್ರಂಪ್ ಹೇಳಿದರು.
ತಾನು ಜನಾಂಗೀಯತೆ ಮತ್ತು ಅಸಹಿಷ್ಣುತೆಯ ವಿಷಯದಲ್ಲಿ ಸಂವೇದನಾರಹಿತನಾಗಿದ್ದೇನೆ ಎಂಬ ಟೀಕೆಗಳನ್ನು ಅವರು ನಿರಾಕರಿಸಿದರು.
‘‘ಅಮೆರಿಕದ ಪ್ರತಿ ತಲೆಮಾರು ಸತ್ಯ, ಸ್ವಾತಂತ್ರ ಮತ್ತು ನ್ಯಾಯದ ದೊಂದಿಯನ್ನು ಮುರಿಯದ ಸರಪಣಿಯ ಮೂಲಕ ಇಂದಿನವರೆಗೂ ಮುಂದಿನ ತಲೆಮಾರಿಗೆ ಹಸ್ತಾಂತರಿಸುತ್ತಾ ಬಂದಿದೆ. ಈ ದೊಂದಿ ಈಗ ನಮ್ಮ ಕೈಯಲ್ಲಿದೆ. ಜಗತ್ತನ್ನು ಬೆಳಗಿಸಲು ನಾವು ಅದನ್ನು ಬಳಸಲಿದ್ದೇವೆ. ಏಕತೆ ಮತ್ತು ಶಕ್ತಿಯ ಸಂದೇಶವನ್ನು ನೀಡಲು ಇಂದು ರಾತ್ರಿ ನಾನು ಇಲ್ಲಿದ್ದೇನೆ ಹಾಗೂ ಈ ಸಂದೇಶ ನನ್ನ ಹೃದಯದಾಳದಿಂದ ಹೊರಬಂದಿದೆ’’ ಎಂದರು.
ಕಳೆದ ಬುಧವಾರ ಕ್ಯಾನ್ಸಸ್ ನಗರದ ಒಲಾತ್ ಪಟ್ಟಣದ ಬಾರೊಂದರಲ್ಲಿ ಇದ್ದ 32 ವರ್ಷದ ಹೈದರಾಬಾದ್‌ನ ಇಂಜಿನಿಯರ್ ಶ್ರೀನಿವಾಸ ಕುಚಿಭೋಟ್ಲ ಅವರನ್ನು ಮಾಜಿ ನೌಕಾ ಪಡೆ ಅಧಿಕಾರಿಯೊಬ್ಬ ಗುಂಡು ಹಾರಿಸಿ ಕೊಂದಿರುವುದನ್ನು ಸ್ಮರಿಸಬಹುದಾಗಿದೆ.
51 ವರ್ಷದ ಆರೋಪಿ ಆ್ಯಡಂ ಪುರಿಂಟನ್ ಗುಂಡು ಹಾರಿಸುವ ಮುನ್ನ, ‘‘ನನ್ನ ದೇಶದಿಂದ ತೊಲಗು’’ ಎಂದು ಕೂಗಿದ್ದ ಎನ್ನಲಾಗಿದೆ.