ಕ್ಯಾಲಿಫೋರ್ನಿಯ ವಿವಿಯ 49 ಐಟಿ ಉದ್ಯೋಗಗಳು ಭಾರತಕ್ಕೆ ಪರಭಾರೆ

Update: 2017-03-01 14:42 GMT

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಮಾ. 1: ಸ್ಯಾನ್‌ಫ್ರಾನ್ಸಿಸ್ಕೊದ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯವು ಮಂಗಳವಾರ ತನ್ನ 49 ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ ಹಾಗೂ ಅವರ ಕೆಲಸಗಳನ್ನು ಭಾರತದಲ್ಲಿರುವ ಕಂಪೆನಿಯೊಂದಕ್ಕೆ ಪರಭಾರೆ (ಔಟ್‌ಸೋರ್ಸಿಂಗ್) ಮಾಡಿದೆ.

ಈ ಮೂಲಕ ವಿಶ್ವವಿದ್ಯಾನಿಲಯವು ಒಂದು ವರ್ಷದಿಂದ ನಡೆದುಕೊಂಡು ಬರುತ್ತಿದ್ದ ಪ್ರಕ್ರಿಯೆಗೆ ಮಂಗಳ ಹಾಡಿದೆ. ಆದರೆ, ಸರಕಾರಿ ವಿಶ್ವವಿದ್ಯಾನಿಲಯದ ಈ ಕ್ರಮವು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಐದು ವರ್ಷಗಳ ಅವಧಿಯಲ್ಲಿ 30 ಮಿಲಿಯ ಡಾಲರ್ (ಸುಮಾರು 200 ಕೋಟಿ ರೂಪಾಯಿ) ಉಳಿಸುವುದಕ್ಕಾಗಿ ವಿಶ್ವವಿದ್ಯಾನಿಲಯವು ಈ ಮಿತವ್ಯಯದ ಕ್ರಮವನ್ನು ತೆಗೆದುಕೊಂಡಿದೆ.

ಆರೋಗ್ಯ ರಕ್ಷಣೆ ಮತ್ತು ಸಂಶೋಧನೆ ಆಧರಿತ ಯುಸಿಎಸ್‌ಎಫ್ ಮುಂತಾದ ವಿಷಯಗಳನ್ನು ಒಳಗೊಂಡ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯವು ಆದಾಯ ಸಂಗ್ರಹಿಸಲು ಮತ್ತು ವೆಚ್ಚಗಳನ್ನು ಕಡಿತ ಮಾಡಲು ಪರದಾಡುತ್ತಿತ್ತು.

ಹೊರ ಹೋದ ಉದ್ಯೋಗಗಳನ್ನು ವಾಪಸ್ ಪಡೆಯುವ ಹಾಗೂ ತಮ್ಮ ಕಾರ್ಖಾನೆಗಳನ್ನು ವಿದೇಶಗಳಿಗೆ ವರ್ಗಾಯಿಸುವ ಕಂಪೆನಿಗಳ ವಿರುದ್ಧ ದಂಡ ಹಾಕುವ ಭರವಸೆಯೊಂದಿಗೆ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News